ಕುಲ್ಲು (ಹಿಮಾಚಲಪ್ರದೇಶ): ಕುಲು: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಟೆಂಪೋ ಟ್ರಾವೆಲರ್ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ 7 ಪ್ರವಾಸಿಗರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ 10 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಬಂಜಾರಿನ ಘಿಯಾಗಿ ಜಲೋಡಾ ಬಳಿಯ ರಾಷ್ಟ್ರೀಯ ಹೆದ್ದಾರಿ-305 ರಲ್ಲಿ ಈ ಘಟನೆ ಸಂಭವಿಸಿದೆ. ಮೃಪಟ್ಟವರು ವಾರಣಾಸಿಯ ಐಐಟಿ ವಿದ್ಯಾರ್ಥಿಗಳು ಎಂದು ಹೇಳಲಾಗುತ್ತಿದೆ.
ಬಂಜಾರ್‌ನ ಬಿಜೆಪಿ ಶಾಸಕ ಸುರೇಂದ್ರ ಶೌರಿ ಕೂಡ ಟ್ವೀಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಗಾಯಾಳುಗಳನ್ನು ಮೊದಲು ಬಂಜಾರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಕುಲು ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತ ಪ್ರವಾಸಿಗರು ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ ಮತ್ತು ದೆಹಲಿ ಸೇರಿದಂತೆ ವಿವಿಧ ರಾಜ್ಯಗಳವರಾಗಿದ್ದು, ಅವರ ಕುರಿತ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮಧ್ಯರಾತ್ರಿ 12.45 ರ ಸುಮಾರಿಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಫೇಸ್‌ಬುಕ್ ಲೈವ್‌ನಲ್ಲಿ ಶೌರಿ ವಿಡಿಯೋ ಲೈವ್ಸ್ಟ್ರೀಮ್ ಮಾಡಿದ್ದಾರೆ, ಬಂಜಾರ್ ಉಪವಿಭಾಗದ ಘಿಯಾಘಿ ಬಳಿ ಸಂಭವಿಸಿದ ಅಪಘಾತದ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ.
ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತರ ಮತ್ತು ಗಾಯಾಳುಗಳ ಗುರುತು ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸರು ನಡೆಸುತ್ತಿದ್ದಾರೆ.
ದಟ್ಟ ಕತ್ತಲೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ ಮತ್ತು ಸ್ಥಳೀಯರಿಗೆ ಶೌರಿ ಕೃತಜ್ಞತೆ ಸಲ್ಲಿಸಿದರು. ಸುಮಾರು ಒಂದು ವಾರದ ಹಿಂದೆ, ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಏಳು ಜನರು ಮೃತಪಟ್ಟಿದ್ದರು. ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯಿಂದ ಕೆಳಗೆ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿತ್ತು. (ಏಜೆನ್ಸೀಸ್)