ನ್ಯೂಸ್

100 ಮಂದಿಗೆ ತಲಾ 13 ಕೋಟಿ ನೀಡಿದ ಎಚ್‌ಡಿಎಫ್‌ಸಿ ಬ್ಯಾಂಕ್‌! ಅಕೌಂಟ್ ಬ್ಯಾಲೆನ್ಸ್‌ ನೋಡಿ ಸುಸ್ತಾದ ಗ್ರಾಹಕರು

ಚೆನ್ನೈ (ತಮಿಳುನಾಡು) : ಕೆಲ ದಿನಗಳ ಹಿಂದೆ ಎಸ್‌ಬಿಐ ಸಿಬ್ಬಂದಿಯ ಎಡವಟ್ಟಿನಿಂದ ಹಲವಾರು ಗ್ರಾಹಕರ ಅಕೌಂಟ್‌ಗೆ ಲಕ್ಷ ಲಕ್ಷ ರೂಪಾಯಿ ಜಮಾ ಆಗಿರುವುದು ಸುದ್ದಿಯಾಗಿತ್ತು. ಇದೀಗ ಇಂಥದ್ದೇ ಮತ್ತೊಂದು ಎಡವಟ್ಟು ನಡೆದಿದೆ.

ಚೆನ್ನೈನ ಟಿ.ನಗರ ಶಾಖೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ 100 ಗ್ರಾಹಕರ ಖಾತೆಗೆ ತಲಾ 13 ಕೋಟಿ ರೂಪಾಯಿ ಜಮಾ ಮಾಡಿದ್ದು, ಬ್ಯಾಂಕ್‌ ಬ್ಯಾಲೆನ್ಸ್‌ ನೋಡಿದ ಗ್ರಾಹಕರು ಸುಸ್ತಾಗಿ ಹೋಗಿದ್ದಾರೆ.

ಕೆಲವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅಪರಾಧ ವಿಭಾಗದ ಪೊಲೀಸರು ಮತ್ತು ಬ್ಯಾಂಕ್ ವಂಚನೆ ಘಟಕಕ್ಕೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ ಇದು ಬ್ಯಾಂಕ್ ಸಿಬ್ಬಂದಿಯ ಎಡವಟ್ಟಿನಿಂದ ಆದದ್ದೋ ಅಥವಾ ಬ್ಯಾಂಕ್‌ನ ಸರ್ವರ್ ಹ್ಯಾಕ್ ಮಾಡಿ ಹಣ ವರ್ಗಾವಣೆ ಮಾಡಲಾಗಿದೆಯೇ ಎಂಬ ರೀತಿಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೆ ಬ್ಯಾಂಕ್‌ ಕಡೆಯಿಂದ ಯಾವುದೇ ದೂರುಗಳು ಬಂದಿಲ್ಲದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಈ ಕುರಿತು ಮಾತನಾಡಿರುವ ಸಂದೀಪ್‌ ಎನ್ನುವ ಗ್ರಾಹಕರು, ನನಗೆ 13 ಕೋಟಿ ರೂಪಾಯಿ ಬಂದ ಬಗ್ಗೆ ಯಾವುದೇ ಮೆಸೇಜ್‌ ಬಂದಿರಲಿಲ್ಲ. ಆದರೆ ನಾನು ಎಟಿಎಂಗೆ ಹೋಗಿ 10 ಸಾವಿರ ರೂಪಾಯಿ ಹಣವನ್ನು ಡ್ರಾ ಮಾಡಿದೆ. ನನ್ನ ಬ್ಯಾಲೆನ್ಸ್‌ 13 ಕೋಟಿ 43 ಲಕ್ಷ ಎಂದು ತೋರಿಸಿತು. ಇದರಿಂದ ಶಾಕ್‌ ಆಗಿ ದೂರು ನೀಡಿದೆ ಎಂದಿದ್ದಾರೆ. ಇನ್ನೂ ಹಲವರಿಗೆ ಇದೇ ರೀತಿ ಆಗಿದ್ದರೂ ಕೆಲವರು ಬಂದದ್ದು ಬರಲಿ ಎಂದು ಸುಮ್ಮನಿದ್ದಾನೆ. ಆದರೆ ಬ್ಯಾಂಕ್‌ ಸಿಬ್ಬಂದಿ ಇವರ ಹಣವನ್ನು ವಾಪಸ್‌ ಪಡೆಯಲಿದ್ದಾರೆ ಎನ್ನಲಾಗಿದೆ.