ನ್ಯೂಸ್

VIDEO: ಪತ್ನಿ ಹುಟ್ಟುಹಬ್ಬಕ್ಕೆ ವಿದೇಶ ಪ್ರವಾಸದ ಬದಲು ಪ್ರತಿಭಟನಾ ರೈತರಿಗೆ ಉಚಿತ ಕ್ಷೌರ, ಮಸಾಜ್​!

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ಪ್ರತಿಭಟನೆಗೆ ತಿಂಗಳಾಗುತ್ತ ಬಂದಿದೆ. ಜಪ್ಪಯ್ಯ ಎಂದರೂ ಪ್ರತಿಭಟನೆಯ ಸ್ಥಳ ಬಿಟ್ಟು ಹೋಗಲು ರೈತರು ಅದರಲ್ಲಿಯೂ ಮುಖ್ಯವಾಗಿ ಪಂಜಾಬ್​, ಹರಿಯಾಣದ ರೈತರು ತಯಾರಿಲ್ಲ. ಆರು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿ ತಂದಿರುವುದಾಗಿ ಅವರು ಘೋಷಿಸಿಯೂ ಆಗಿದೆ.

ಈ ನಡುವೆಯೇ, ಸಿಂಗು ಗಡಿಯಲ್ಲಿ ರೈತರಿಗೆ ದಿನನಿತ್ಯ ಕ್ಷೌರದ್ದೇ ಸಮಸ್ಯೆಯಾಗಿತ್ತು. ಈ ಸಮಸ್ಯೆಯನ್ನು ಇದೀಗ ದೂರ ಮಾಡಿದೆ 'ಕ್ರೇಜಿ ಬ್ಯೂಟಿ ಸಲೂನ್'. ಇಲ್ಲಿಯ ಗ್ರಾಹಕರಿಗೆ ಕ್ಷೌರ, ಹೆಡ್ ಮಸಾಜ್, ಡೈ ಏಜಿಂಗ್ ವೈಟ್ ಹೇರ್ ಅಥವಾ ಫೇಸ್ ಮಸಾಜ್ ಎಲ್ಲವನ್ನೂ ಇಲ್ಲಿ ಉಚಿತವಾಗಿ ನೀಡಲಾಗುತ್ತಿದೆ.

ಇಂಥದ್ದೊಂದು ಉಚಿವ ಸೇವೆ ಸಲ್ಲಿಸುತ್ತಿರುವವರು ಲಾಬ್ ಸಿಂಗ್ ಠಾಕೂರ್. ಹೇರ್​ ಸಲೂನ್​ ಇಟ್ಟುಕೊಂಡಿರುವ ಠಾಕೂರ್​ ಅವರು ಪ್ರತಿವರ್ಷವೂ ಈ ಸಮಯದಲ್ಲಿ ಪತ್ನಿಯ ಹುಟ್ಟುಹಬ್ಬದ ನಿಮಿತ್ತ ವಿದೇಶಕ್ಕೆ ಪ್ರವಾಸ ಮಾಡುತ್ತಾರಂತೆ ಈ ಬಾರಿ ಕೆನಡಾಕ್ಕೆ ಹೋಗುವ ಯೋಜನೆ ಹಾಕಿಕೊಂಡಿದ್ದರಂತೆ. ಆದರೆ ಇದೀಗ ಸದ್ಯ ಪ್ರವಾಸದ ವಿಚಾರವನ್ನು ಕೈಬಿಟ್ಟಿದ್ದು, ಪ್ರತಿಭಟನಾ ನಿರತ ರೈತರ ಸೇವೆಯಲ್ಲಿ ತೊಡಗಿದ್ದಾರೆ.

ಎಲ್ಲಿಯವರೆಗೆ ಪ್ರತಿಭಟನೆ ನಡೆಯುತ್ತಿದೆಯೋ ಅಲ್ಲಿಯವರೆಗೆ ತಾವು ಇದೇ ರೀತಿ ಉಚಿತವಾಗಿ ಸೇವೆ ಮಾಡುವುದಾಗಿ ಅವರು ಹೇಳಿದ್ದಾರೆ. ಪ್ರತಿಭಟನಾ ಸ್ಥಳದ ಹೆದ್ದಾರಿಯಲ್ಲಿಯೇ ಈ ಸಲೂನ್​ ಕಾರ್ಯನಿರ್ವಹಿಸುತ್ತಿದೆ. ಟ್ರಾಕ್ಟರ್ ಟ್ರಾಲಿಯ ಮೇಲೆ ಬೃಹತ್​ ಕನ್ನಡಿ ಅಳವಡಿಸಲಾಗಿದ್ದು, ಗ್ರಾಹಕರಿಗೆ, ಮೂರು ಕುರ್ಚಿಗಳನ್ನು ಇಡಲಾಗಿದೆ. ಅಲ್ಲಿಯೇ ಕ್ಷೌರ ಮತ್ತು ಮಸಾಜ್​ ಮಾಡಲಾಗುತ್ತದೆ.

"ನಾನು ನನ್ನ ಹೆಂಡತಿಯೊಂದಿಗೆ ಕುರುಕ್ಷೇತ್ರದಲ್ಲಿ ಪಾರ್ಲರ್ ನಡೆಸುತ್ತಿದ್ದೇನೆ. ಅಲ್ಲಿ ನಮ್ಮ ಗ್ರಾಹಕರಲ್ಲಿ ಹೆಚ್ಚಿನವರು ರೈತರು. ಅವರಲ್ಲಿ ಅನೇಕ ರೈತರು ಪ್ರತಿಭಟನೆಗೆ ಬಂದಿದ್ದಾರೆ. ಸಿಂಗು ಗಡಿಯಲ್ಲಿ ಕ್ಷೌರದ ಅಗತ್ಯವಿದೆ ಎಂದು ತಿಳಿಯಿತು. ಆದ್ದರಿಂದ, ನಾನು ನನ್ನ ತಂಡದೊಂದಿಗೆ ಇಲ್ಲಿಗೆ ಬಂದಿದ್ದೇನೆ. ಸರಾಸರಿ, ನಾವು ದಿನಕ್ಕೆ ಸುಮಾರು 100-150 ಜನರಿಗೆ ಹೇರ್​ಕಟ್​, ಮಸಾಜ್​ ಮಾಡುತ್ತೇವೆ. ಎಲ್ಲವೂ ಉಚಿತ. ಕೆಲವರು ದುಡ್ಡು ಕೊಡಲು ಬರುತ್ತಾರೆ, ಆದರೆ ನಾನು ಸ್ವೀಕರಿಸುವುದಿಲ್ಲ ಎನ್ನುತ್ತಾರೆ ಲಾಬ್ ಸಿಂಗ್ ಠಾಕೂರ್.

ಪ್ರತಿವರ್ಷವೂ ನನ್ನ ಪತ್ನಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನಮ್ಮ ಸಲೂನ್ ನಡೆಸಲು ನನ್ನ ಹೆಂಡತಿ ಸಾಕಷ್ಟು ಕೊಡುಗೆ ನೀಡಿದ್ದಾಳೆ. ಗ್ರಾಹಕರು ಕುರುಕ್ಷೇತ್ರದಲ್ಲಿರುವ ನಮ್ಮ ಅಂಗಡಿಗೆ ಭೇಟಿ ನೀಡಿದಾಗಲೆಲ್ಲಾ ಆಕೆ ಚಹಾವನ್ನು ನೀಡಿ, ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಆದರೆ ಈ ಹುಟ್ಟುಹಬ್ಬವನ್ನು ಆಕೆಯ ಜತೆ ಆಚರಿಸಲು ಆಗುತ್ತಿಲ್ಲ ಎಂಬ ನೋವಿದೆ. ಆದರೆ ಈ ಸೇವೆಯಿಂದ ಆಕೆಯೂ ಖುಷಿಯಾಗಿದ್ದಾಳೆ ಎನ್ನುತ್ತಾರೆ ಠಾಕೂರ್​.