ನ್ಯೂಸ್

ಗರ್ಲ್​ಫ್ರೆಂಡ್​ಗಾಗಿ ಬ್ಯಾಂಕ್​ಗೆ ಕನ್ನ ಹಾಕಿದೆ.... ಪ್ಲೀಸ್​ ನನ್ನನ್ನು ಬಿಟ್ಟುಬಿಡಿ...

ರಾಯ್ಪುರ: ನನ್ನ ಗರ್ಲ್​ಫ್ರೆಂಡ್​ ತುಂಬಾ ಖರ್ಚು ಮಾಡುತ್ತಾಳೆ. ಅವಳ ಶಾಪಿಂಗ್​ಗೆ ಖರ್ಚು ಮಾಡಲು ನನ್ನ ಬಳಿ ಹಣ ಇರಲಿಲ್ಲ. ಅದಕ್ಕಾಗಿ ದರೋಡೆ ಮಾಡಿದೆ, ನನ್ನನ್ನು ಬಿಟ್ಟುಬಿಡಿ ಪ್ಲೀಸ್​...

ಹೀಗೆಂದು ಗೋಗರೆದಿರುವ ಯುವಕ ರಾಯಗಢದ ಚರಖಾಪುರ ನಿವಾಸಿ ಶಂಕರ್ ರಾಠಿಯ.

ಪ್ರೇಯಸಿ ಖುಷಿಗಾಗಿ ಬ್ಯಾಂಕಿಗೆ ಕನ್ನ ಹಾಕಿ ಸಿಕ್ಕಿಬಿದ್ದಿರುವ ಈ ಪ್ರೇಮಿ ಇದೀಗ ಪೊಲೀಸರ ಅತಿಥಿ! ಗೆಳತಿಗಾಗಿ ಈತ ಮಾಡಿದ್ದು ಬ್ಯಾಂಕ್​ಗೆ ಕನ್ನ ಹಾಕುವ ಕೆಲಸ!

ಬ್ಯಾಂಕಿನಿಂದ ಕಳ್ಳತನ ಮಾಡುವಲ್ಲಿ ಯಶಸ್ವಿಯೂ ಆಗಿದ್ದ ಈತ ಅಲ್ಲಿಂದ 11.55 ಲಕ್ಷ ರೂ. ಎಗರಿಸಿದ್ದ. ಅಕ್ಟೋಬರ್ 8ರಂದು ಪತ್ತಲ್‍ಗ್ರಾಮದ ಎಸ್‍ಬಿಐ ಬ್ಯಾಂಕಿನ ಹಿಂಭಾಗದ ಗೋಡೆಗೆ ಕನ್ನ ಹಾಕಲಾಗಿತ್ತು. ಬೆಳಗ್ಗೆ ಬ್ಯಾಂಕಿಗೆ ಬಂದ ಅಧಿಕಾರಿಗಳು ಕನ್ನ ಹಾಕಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಂತರ ಪರೀಕ್ಷಿಸಿದ್ದಾಗ ಬ್ಯಾಂಕಿನಲ್ಲಿ ಒಟ್ಟು 11.5 ಲಕ್ಷ ರೂ. ನಗದು ಕಳ್ಳತನವಾಗಿರುವುದು ತಿಳಿದುಬಂದಿತ್ತು. ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಬ್ಯಾಂಕ್ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದರು. ಅದರಲ್ಲಿ ಶಂಕರ್ ಚಲನವಲನ ಸೆರೆಯಾಗಿತ್ತು.

ಆತನ ಪತ್ತೆಗೆ ಜಾಲ ಬೀಸಿದ್ದ ಪೊಲಿಸರಿಗೆ ಶಂಕರ್ ಸಿಕ್ಕಿಬಿದ್ದಿದ್ದ. ಆತ ಹೊಲದಲ್ಲಿ ಹಣವನ್ನು ಬಚ್ಚಿಟ್ಟಿದ್ದ.

ಪೊಲೀಸರು ತಮ್ಮದೇ ಧಾಟಿಯಲ್ಲಿ ವಿಚಾರಣೆ ಮಾಡಿದಾಗ ಎಲ್ಲಾ ವಿಷಯ ತಿಳಿಸಿದ್ದಾನೆ. ತನ್ನ ಪ್ರೇಯಸಿ ಹೆಚ್ಚು ಖರ್ಚು ಮಾಡುತ್ತಿದ್ದಳು. ಆಕೆಯ ಖರ್ಚಿಗಾಗಿ ಬ್ಯಾಂಕಿನಲ್ಲಿ ಕಳ್ಳತನ ಮಾಡಿದೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಹಣವನ್ನ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.