ನವದೆಹಲಿ: ಇದುವರೆಗೂ ಕರೊನಾ ವೈರಸ್‌ಗೆ ದೇಶದಲ್ಲಿ 382 ಕರ್ತವ್ಯದಲ್ಲಿದ್ದ ಆರೋಗ್ಯ ಸಿಬ್ಬಂದಿ ಬಲಿಯಾಗಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಿಳಿಸಿದ ಬೆನ್ನಲ್ಲೇ ಕೇವಲ 155 ಮಂದಿ ಮಾತ್ರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿ ವಿಮಾ ಹಣ ಪಡೆದಿರುವುದಾಗಿ ಸರ್ಕಾರ ಲೋಕಸಭೆಗೆ ಹೇಳಿದೆ.
64 ಮಂದಿ ವೈದ್ಯರು ಸೇರಿದಂತೆ 155 ಮಂದಿ ಆರೋಗ್ಯ ಸಿಬ್ಬಂದಿ ತಲಾ 50 ಲಕ್ಷ ರೂಪಾಯಿಗಳ ಹಣವನ್ನು ಪಡೆದಿರುವುದಾಗಿ ಸರ್ಕಾರ ಹೇಳಿದೆ.
ಕರೊನಾದ ಹಾಟ್ಸ್ಪಾಟ್ಗಳಲ್ಲಿ ಅಗ್ರಸ್ಥಾನದಲ್ಲಿ ಇರುವ ಮಹಾರಾಷ್ಟ್ರದಲ್ಲಿ 21 ಕುಟುಂಬಗಳು ವಿಮಾ ಹಣವನ್ನು ಪಡೆದುಕೊಂಡಿವೆ. ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 14 ಕುಟುಂಬಗಳಿಗೆ ವಿಮಾ ಹಣ ನೀಡಲಾಗಿದೆ. ಆಂಧ್ರಪ್ರದೇಶದಲ್ಲಿ 12 ಮತ್ತು ತಮಿಳುನಾಡಿನಲ್ಲಿ 10 ಫಲಾನುಭವಿಗಳಿಗೆ ಹಣವನ್ನು ನೀಡಲಾಗಿದೆ. ಈ ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಸಹಾಯಕ ದಾದಿಯ ಶುಶ್ರೂಷಕಿಯರು ಸೇರಿದ್ದಾರೆ ಎಂದು ಅದು ತಿಳಿಸಿದೆ.
ಕೋವಿಡ್-19 ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗಾಗಿ ‘ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್’ ಅಡಿಯಲ್ಲಿ ವಿಮಾ ಯೋಜನೆಯನ್ನು ಮಾರ್ಚ್ 30 ರಂದು ಘೋಷಿಸಲಾಗಿದೆ. ಈ ಯೋಜನೆಯನ್ನು ಆರಂಭದಲ್ಲಿ ಮೂರು ತಿಂಗಳ ಅವಧಿಗೆ ಘೋಷಿಸಲಾಗಿತ್ತು. ನಂತರ ಅದನ್ನು ವಿಸ್ತರಿಸಲಾಗಿದೆ.
ಕರೊನಾದಿಂದ ಮೃತಪಟ್ಟ ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರ ಸಂಬಂಧಿಕರಿಗೆ ಪರಿಹಾರ ನೀಡುವುದು ಅಥವಾ ಅವರ ಕುಟುಂಬಸ್ಥರಿಗೆ ಉದ್ಯೋಗ ನೀಡುವ ಬಗ್ಗೆ ಸದ್ಯ ಯಾವುದೇ ನಿರ್ದಿಷ್ಟ ಯೋಜನೆಗಳ ಪ್ರಸ್ತಾವವಿಲ್ಲ ಎಂದು ಆರೋಗ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದರು.
ಅತಿ ಸಣ್ಣ ವಯಸ್ಸಿನ, ಎಂದರೆ 27 ವರ್ಷದ ವೈದ್ಯ ಹಾಗೂ 85 ವರ್ಷದ ಹಿರಿಯ ವೈದ್ಯರು ಕರೊನಾಕ್ಕೆ ಬಲಿಯಾಗಿರುವ ಬಗ್ಗೆ ಐಎಂಎ ಹೇಳಿದೆ.