ನ್ಯೂಸ್

ಆಶ್ರಮಕ್ಕೆ ಸೇವೆ ಸಲ್ಲಿಸಲು ಹೋದ ನಾಲ್ವರು ಮಹಿಳೆಯರ ಮೇಲೆ ‘ದೇವಮಾನವ’ನಿಂದ ಅತ್ಯಾಚಾರ

ಜೈಪುರ: ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಿದ್ದ ನಾಲ್ವರು ಮಹಿಳೆಯರ ಮೇಲೆ ಸ್ವಯಂ ಘೋಷಿತ ದೇವಮಾನವ ಅತ್ಯಾಚಾರ ಎಸಗಿರುವ ಭಯಾನಕ ಘಟನೆ ಜೈಪುರದ ತಪಸ್ವಿ ಆಶ್ರಮದಲ್ಲಿ ನಡೆದಿದೆ.

ಶೈಲೇಂದ್ರ ಮೆಹ್ತಾ ಎಂಬಾತನ ವಿರುದ್ಧ ಈ ದೂರು ಕೇಳಿಬಂದಿದೆ. ಒಂದೇ ಕುಟುಂಬದ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಮಹಿಳೆಯರು ಈತನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಾರೆ. ಸೇವೆಯ ಉದ್ದೇಶದಿಂದ ಕೆಲವು ದಿನ ಆಶ್ರಮದಲ್ಲಿ ತಂಗುತ್ತಿದ್ದ ಮಹಿಳೆಯರ ಮೇಲೆ ಈತ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್‌ ಅಧಿಕಾರಿ ಮುಕೇಶ್‌ ಚೌಧರಿ ಅವರು ಮಾಹಿತಿ ನೀಡಿದ್ದಾರೆ.

'ಆಶ್ರಮದಲ್ಲಿ ಸತ್ಸಂಗ ಹಾಗೂ ಕೆಲವು ಸೇವಾ ಕಾರ್ಯಕ್ರಮಗಳು ನಡೆಯುತ್ತವೆ. ಇವುಗಳಲ್ಲಿ ಭಾಗಿಯಾಗಲು ಹಲವು ವರ್ಷಗಳಿಂದ ನಾವು ಆಶ್ರಮಕ್ಕೆ ಭೇಟಿ ನೀಡುತ್ತ ಬಂದಿದ್ದೇವೆ. ಸೇವಾ ದೃಷ್ಟಿಯಿಂದ ಈ ಕೆಲಸ ನಾವು ಮಾಡುತ್ತಿದ್ದೇವೆ. ಆಗ ಈತ ನಮ್ಮ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯರು ದೂರು ದಾಖಲಿಸಿರುವುದಾಗಿ ಚೌಧರಿ ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಯೊಬ್ಬರು ತಮ್ಮ ಮಗಳನ್ನು ಆಶ್ರಮಕ್ಕೆ ಕರೆದುಕೊಂಡು ಹೋಗದಂತೆ ಪತಿಗೆ ತಡೆದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ತನಿಖೆ ನಡೆಯುತ್ತಿದ್ದು, ಈ ವರೆಗೆ ಆರೋಪಿಯನ್ನು ಬಂಧಿಸಿಲ್ಲ ಎನ್ನಲಾಗಿದೆ.