ನ್ಯೂಸ್

ಜ್ಞಾನವಾಪಿ ಮಸೀದಿ ವಿವಾದ: ಶಿವಲಿಂಗಕ್ಕೆ ಭದ್ರತೆ, ನಮಾಜ್​ಗೆ ಅವಕಾಶ, ಕೇಸ್​ ವರ್ಗಾವಣೆ: ಇದು ಸುಪ್ರೀಂ ಆದೇಶ

ನವದೆಹಲಿ: ಬಹು ವಿವಾದ ಸೃಷ್ಟಿಸಿರುವ ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್​ ಈ ಕುರಿತಂತೆ ಮೂರು ಮಹತ್ವದ ಆದೇಶಗಳನ್ನು ಹೊರಡಿಸಿದೆ.

ಈ ಮಸೀದಿ ಹಾಗೂ ಕಾಶಿ ವಿಶ್ವನಾಥ ಗಲಾಟೆಗೆ ಸಂಬಂಧಿಸಿದ ಕೇಸ್​ನ ವಿಚಾರಣೆಯು ಸದ್ಯ ವಾರಾಣಸಿಯ ಹಿರಿಯ ಸಿವಿಲ್​ ನ್ಯಾಯಾಲಯದಲ್ಲಿ ನಡೆದಿದ್ದು, ಅದನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಕೋರ್ಟ್​ ತೀರ್ಪಿತ್ತಿದೆ. ಇದು ಸೂಕ್ಷ್ಮ ವಿಷಯ ಆಗಿರುವ ಹಿನ್ನೆಲೆಯಲ್ಲಿ ತುಂಬಾ ಅನುಭವ ಇರುವ ನ್ಯಾಯಾಧೀಶರು ಇದರ ವಿಚಾರಣೆ ನಡೆಸಬೇಕು ಎಂದಿರುವ ನ್ಯಾಯಪೀಠ, ಕೇಸ್​ ಅನ್ನು ಜಿಲ್ಲಾ ಕೋರ್ಟ್​ಗೆ ವರ್ಗಾಯಿಸಿದೆ.

ಇದರ ಜತೆಗೆ, ಇದಾಗಲೇ ಇಲ್ಲಿ ದೊರೆತ ಶಿವಲಿಂಗಕ್ಕೆ ಭದ್ರತೆ ನೀಡುವಂತೆ ಕೋರ್ಟ್​ ಹೇಳಿದೆ. ಇದಾಗಲೇ ಈ ಜಾಗದಲ್ಲಿ ಮುಸ್ಲಿಮರು ನಮಾಜ್​ ಮಾಡುತ್ತಿದ್ದು, ಅದು ಮುಂದುವರೆಯಲಿ ಎಂದೂ ಕೋರ್ಟ್​ ಅಭಿಪ್ರಾಯ ಪಟ್ಟಿದೆ.

ಈ ನಡುವೆ ಹಿಂದೂ ಪರ ಮತ್ತು ಮಸೀದಿ ಪರ ವಕೀಲರಿಂದ ಕೋರ್ಟ್​ ಆವರಣ ಕೆಲ ಕಾಲ ಗರಂ ಆಗಿತ್ತು. ಹಿಂದೂ ಸಂಘಟನೆಗಳ ಪರ ವಕೀಲರು, ಜ್ಞಾನವಾಪಿ ಮಸೀದಿಯು ಮಸೀದಿಯೇ ಅಲ್ಲ. 1669ರ ಏಪ್ರಿಲ್ 9ರಂದು ಅಂದಿನ ಇಸ್ಲಾಮಿಕ್ ದೊರೆ ಔರಂಗಜೇಬ್ ವಾರಾಣಸಿಯಲ್ಲಿರುವ ಆದಿ ವಿಶ್ವೇಶ್ವರ ದೇವಾಲಯ ಕೆಡವಲು ನಿರ್ದೇಶಿಸಿ ಹೊರಡಿಸಿದ್ದ. ಇದನ್ನು ಇತಿಹಾಸಕಾರರು ದೃಢಪಡಿಸಿದ್ದಾರೆ. ಆದರೆ, ಈ ಭೂಮಿ ಬಗ್ಗೆ ವಕ್ಫ್ ರಚಿಸಲು ಅಥವಾ ಯಾವುದೇ ಮುಸ್ಲಿಮರು ಅಥವಾ ಮುಸ್ಲಿಮರ ಸಮಿತಿಗೆ ಹಸ್ತಾಂತರಿಸುವ ಕುರಿತು ಯಾವುದೇ ದಾಖಲೆಗಳು ಇಲ್ಲ ಎಂದು ಹೇಳಿದರು.

ಕಾಶಿ ಹಲವಾರು ಬಾರಿ ದಾಳಿಗೆ ಗುರಿಯಾಗಿದೆ. ಆದಿ ವಿಶ್ವೇಶ್ವರನ ದೇವಾಲಯದ ಮೇಲೆ 1193ರಿಂದ 1669ರವರೆಗೆ ಅನೇಕ ಬಾರಿ ಆಕ್ರಮಣ ಮಾಡಲಾಗಿದೆ. ಅಲ್ಲದೇ, ಈ ದೇವಸ್ಥಾನ ಲೂಟಿ ಮಾಡಿ ಕೆಡವಲಾಯಿತು ಎಂದು ವಕೀಲರು ವಾದಿಸಿದರು. ಇದು ಬ್ರಿಟೀಷ್ ಕ್ಯಾಲೆಂಡರ್ ಪ್ರಾರಂಭವಾಗುವ ಮೊದಲೇ ಆದಿ ವಿಶೇಶ್ವರ ದೇವರಿಗೆ ಸೇರಿದ ಆಸ್ತಿಯಾಗಿದ್ದು, ಈಗಲೂ ಮುಂದುವರಿಯುತ್ತಿದೆ. ಔರಂಗಜೇಬ್​ 'ಹಿಂದೂ ದೇವಾಲಯಗಳ ವಿಧ್ವಂಸಕದಲ್ಲಿ ಚಾಂಪಿಯನ್' ಆಗಿದ್ದು, 1669ರಲ್ಲಿ ಹಿಂದೂಗಳು ಪ್ರಮುಖವಾಗಿ ಪೂಜಿಸುತ್ತಿದ್ದ ಕಾಶಿ ಮತ್ತು ಮಥುರಾ ಸೇರಿದಂತೆ ಅನೇಕ ದೇವಾಲಯಗಳನ್ನು ನಾಶಮಾಡಲು ಫರ್ಮಾನ್‌ಗಳನ್ನು ಹೊರಡಿಸಿದ್ದ ಎಂದರು.

ಆದರೆ ಇದಕ್ಕೆ ಮಸೀದಿ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ಸಮೀಕ್ಷೆ ನಡೆಸಿ ಬಂದಿರುವ ವರದಿಗಳನ್ನು ಕೋರ್ಟ್​ಗೆ ಸಲ್ಲಿಸುವ ಮೊದಲೇ ಸೋರಿಕೆ ಮಾಡಬೇಡಿ ಎಂದು ಸರ್ವೆ ಕಾರ್ಯ ಕೈಗೊಂಡಿರುವವರಿಗೆ ಸುಚಿಸಿದರು.