ನ್ಯೂಸ್

ಟ್ಯೂಷನ್​ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ರೇಪ್​- ವಿಷ ಕುಡಿಸಿ ಕೊಲೆ ಮಾಡಿದ ಪಾಪಿಗಳು!

ಮೀರತ್ (ಉತ್ತರ ಪ್ರದೇಶ) : 10ನೇ ತರಗತಿಯ ವಿದ್ಯಾರ್ಥಿನಿಯನ್ನು ಗ್ಯಾಂಗ್​ರೇಪ್​ ಮಾಡಿ ವಿಷ ಕುಡಿಸಿ ಸಾಯಿಸಿದ ಭಯಾನಕ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ.

ವಿದ್ಯಾರ್ಥಿನಿ ಟ್ಯೂಷನ್​ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಸರ್ದಾನ ಕೋಟ್ವಾಲಿ ಪ್ರದೇಶದ ಬಳಿ ಆಕೆಯನ್ನು ಅಪಹರಿಸಿದ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ, ನಂತರ ಆಕೆಗೆ ವಿಷ ನೀಡಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿ ಅದೇ ಕಂಡೀಷನ್​ನಲ್ಲಿ ಮನೆಗೆ ಬಂದಿದ್ದಾಳೆ.

ಕೂಡಲೇ ಘಟನೆ ಕುರಿತು ವಿವರಣೆ ನೀಡಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿಯೇ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ.

ನಾಲ್ವರು ಯುವಕರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಬಾಲಕಿ ಹೇಳಿದ್ದಾಳೆ. ಪಕ್ಕದ ಹಳ್ಳಿಯ ನಿವಾಸಿಗಳಾದ ಸಂಜಯ್ ಎಂಬುವವರ ಮಗ ಲಖನ್ ಮತ್ತು ಬಲವಂತ್ ಅಲಿಯಾಸ್ ಮುರಳಿ ಎನ್ನುವವರ ಮಗ ವಿಕಾಸ್ ಮತ್ತು ಇನ್ನಿಬ್ಬರ ಹೆಸರನ್ನು ಬಾಲಕಿ ಹೇಳಿದ್ದಾಳೆ. ಲಖನ್ ಮತ್ತು ವಿಕಾಸ್ ಬಂಧನವಾಗಿದ್ದು ಉಳಿದಿಬ್ಬರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಲಕಿಯ ಮನೆಯ ಬಳಿಯೇ ಇರುವ ಟವರ್ ಒಂದರ ಬಳಿ ಕಾಪಸಾಡ್ ಗ್ರಾಮದ ನಾಲ್ವರು ಯುವಕರು ಅಪಹರಿಸಿ ರೇಪ್ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.