ನ್ಯೂಸ್

ಷಾಪಿಂಗ್‌ಗೆ ಹೋದ ಇಡೀ ಕುಟುಂಬವನ್ನೇ ಬಲಿಪಡೆದ ಜವರಾಯ: ಅಪ್ಪ-ಅಮ್ಮ, ಮಕ್ಕಳ ಸಾವು!

ಸತನಾ (ಮಧ್ಯಪ್ರದೇಶ): ಭೀಕರ ಅಪಘಾತವೊಂದರಲ್ಲಿ ಇಡೀ ಕುಟುಂಬವೇ ಸರ್ವನಾಶವಾಗಿರುವ ಭಯಾನಕ ಘಟನೆಯೊಂದು ಮಧ್ಯಪ್ರದೇಶದ ಸತನಾದಲ್ಲಿ ನಡೆದಿದೆ. ಈ ಅಪಘಾತದಲ್ಲಿ ಅಪ್ಪ-ಅಮ್ಮ ಸೇರಿ ಇಬ್ಬರು ಕಂದಮ್ಮಗಳೂ ಬಲಿಯಾಗಿದ್ದು, ಇಡೀ ಕುಟುಂಬಕ್ಕೆ ಕುಟುಂಬವೇ ಬಲಿಯಾಗಿದೆ.

ಸತ್ಯಂ ಉಪಾಧ್ಯಾಯ ಕುಟುಂಬ ಇಂಥದ್ದೊಂದು ದುರಂತ ಅಂತ್ಯ ಕಂಡಿದೆ. ಕಾರಿನಲ್ಲಿ ಈ ಕುಟುಂಬದ ಸದಸ್ಯರು ಷಾಪಿಂಗ್‌ಗೆ ಹೋಗಿದ್ದರು. ಕಾರಿನಲ್ಲಿ ಅದರಲ್ಲಿ ಸತ್ಯ (40), ಅವರ ಪತ್ನಿ ಮೋನಿಕಾ (36), ಮಕ್ಕಳಾದ ಇಶಾನಿ (10) ಹಾಗೂ ಸ್ನೇಹಾ (8) ಇದ್ದರು. ಷಾಪಿಂಗ್‌ ಮುಗಿಸಿ ಮನೆಗೆ ವಾಪಸಾಗುವ ಸಂದರ್ಭದಲ್ಲಿ ಯಮನಾಗಿ ಬಂದ ಟ್ರಕ್​ ಕಾರಿಗೆ ಡಿಕ್ಕಿ ಹೊಡೆದಿದೆ.

ಈ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ನಾಲ್ವರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೇಸನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಈ ದುರ್ಘಟನೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್​ ಚೌಹಾಣ್​ ಟ್ವೀಟ್‌ ಮಾಡಿದ್ದು, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ‘ಈ ಅಪಘಾತದ ಸುದ್ದಿ ಕೇಳಿ ತುಂಬಾ ಆಘಾತವಾಗಿದ್ದು, ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಸ್ಥರಿಗೆ ಭಗವಂತ ಈ ನೋವು ಭರಿಸುವ ಶಕ್ತಿ ನೀಡಲಿ’ ಎಂದು ಪ್ರಾರ್ಥಿಸಿದ್ದಾರೆ.