ನ್ಯೂಸ್

ಉತ್ತರ ಪ್ರದೇಶದಲ್ಲಿ ಮತಪ್ರಚಾರಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದ ಛತ್ತೀಸಗಢ ಸಿಎಂ: ಎಫ್‌ಐಆರ್ ದಾಖಲು

ನೋಯ್ಡಾ: ಪಂಚರಾಜ್ಯಗಳ ಚುನಾವಣೆಗೆ ಇನ್ನೇನು ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಎಲ್ಲಾ ಪಕ್ಷಗಳೂ ಮತದಾರರನ್ನು ಸೆಳೆಯಲು ಇನ್ನಿಲ್ಲದ ತಂತ್ರ ನಡೆಸುತ್ತಿವೆ. ಅದರಲ್ಲಿಯೂ ಉತ್ತರ ಪ್ರದೇಶ ಚುನಾವಣೆಯ ಬಹು ಪ್ರತಿಷ್ಠಿತ ಎನಿಸಿಕೊಂಡಿದೆ. ಕರೊನಾ ಪ್ರಚಾರಕ್ಕೆ ತಡೆಯುಂಟು ಮಾಡುತ್ತಿದ್ದರೂ ಅಭ್ಯರ್ಥಿಗಳು ಅವುಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

ಈ ನಡುವೆಯೇ ಉತ್ತರ ಪ್ರದೇಶದ ನೋಯ್ಡಾದಲ್ಲಿ ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮನೆಮನೆಗೆ ಪ್ರಚಾರ ಕಾರ್ಯದಲ್ಲಿ ತೊಡಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೋಯ್ಡಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪಂಖೂರಿ ಪಾಠಕ್ ಪರ ಕಾಂಗ್ರೆಸ್ ಮುಖಂಡರು ಪ್ರಚಾರ ನಡೆಸುತ್ತಿದ್ದರು. ಕೋವಿಡ್‌ನಿಂದಾಗಿ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡಲು ಹೇಳಲಾಗಿದೆ. ಆದರೆ ಇವುಗಳನ್ನು ಉಲ್ಲಂಘಿಸಿ ಭೂಪೇಶ್‌ ಪ್ರಚಾರ ಕಾರ್ಯ ಕೈಗೊಂಡಿದ್ದರಿಂದ ಅವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಕರೊನಾ ನಿಯಂತ್ರಿಸಲು ಐದು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಒಟ್ಟುಗೂಡಿಸುವುದನ್ನು ನಿಷೇಧಿಸುವ ಆದೇಶಗಳ ಉಲ್ಲಂಘಿಸಿರುವ ಹಿನ್ನೆಲೆ ಸಹಾಯಕ ಡಿಸಿಪಿ ಗೆ ಜಿಲ್ಲಾ ಚುನಾವಣಾಧಿಕಾರಿ ಬರೆದ ಪತ್ರ ಆಧರಿಸಿ ದೂರು ದಾಖಲಾಗಿದೆ.