ನ್ಯೂಸ್

VIDEO: ಕಿವಿ ತೆರೆದು ಕೇಳಿಸಿಕೊಳ್ಳಿ... ಮಾರ್ಚ್​ 11ರಿಂದ ನಿಮ್ಮ ಕೌಂಟ್​ಡೌನ್​ ಶುರು... ನಿಮ್ಮ ಆಟ ಕ್ಲೋಸ್​...

ಲಖನೌ: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಅಚ್ಚರಿ ಎನಿಸುವ ರೀತಿಯಲ್ಲಿ ಎಲ್ಲಾ ಲೆಕ್ಕಾಚಾರಗಳನ್ನು, ವಿರೋಧ ಪಕ್ಷಗಳು ಇಷ್ಟು ವರ್ಷ ನಡೆಸಿಕೊಂಡು ಬಂದಿದ್ದ ತಂತ್ರ, ಕುತಂತ್ರಗಳನ್ನೆಲ್ಲಾ ಮೀರಿ ಮತದಾರ ಬಿಜೆಪಿಯ ಕೈಹಿಡಿದಿದ್ದಾನೆ. ಇದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇತ್ತೀಚೆಗೆ ಮಾಡಿದ ಭಾಷಣವೊಂದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಅದೇನೆಂದರೆ, ಮಾರ್ಚ್​ 10ರಂದು ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಮಾರ್ಚ್​ 11ರಂದು ಅಧಿಕಾರ ಸ್ವೀಕಾರ ಶುರುವಾಗಲಿದೆ. ಕೆಲ ದಿನಗಳ ಹಿಂದೆ ಮಾರ್ಚ್​ 11ರ ದಿನದ ಕುರಿತು ಯೋಗಿ ಆದಿತ್ಯನಾಥ ಅವರು ಎಚ್ಚರಿಕೆ ನೀಡಿರುವ ವಿಡಿಯೋ ಇದಾಗಿದೆ.

ಗೂಂಡಾಗಳಿಗೆ, ಭೂಮಾಫಿಯಾ, ಮರಳು ಮಾಫಿಯಾ ಸೇರಿದಂತೆ ಅಪರಾಧಿಕ ಕೃತ್ಯಗಳಲ್ಲಿ ತೊಡಗಿಕೊಂಡವರಿಗೆ ಮಾರ್ಚ್​ 11 ಅಂತಿಮ ದಿನ. ನಿಮ್ಮೆಲ್ಲಾ ಆಟಗಳು ಅಂದಿನಿಂದ ನಡೆಯುವುದಿಲ್ಲ ಎಂದು ಯೋಗಿ ಆದಿತ್ಯನಾಥ ಅವರು ಖಡಕ್​ ಎಚ್ಚರಿಕೆಯನ್ನು ಈ ವಿಡಿಯೋ ಮೂಲಕ ನೀಡಿದ್ದಾರೆ.

ಗೂಂಡಾಗರ್ದಿ ಮಾಡುವವರೇ, ಭೂಮಾಫಿಯಾ, ಮರಳುಮಾಫಿಯಾ ಸೇರಿದಂತೆ ಅಪರಾಧಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರೇ, ಬಡವರ ಭೂಮಿಯನ್ನು ಆಕ್ರಮಿಸಿಕೊಂಡು ತೊಂದರೆ ಕೊಡುವವರೇ... ಎಲ್ಲರೂ ಕಿವಿ ತೆರೆದು ಕೇಳಿಸಿಕೊಳ್ಳಿ. ಮಾರ್ಚ್​ 11ರಿಂದ ನಿಮ್ಮ ಕೌಂಟ್​ಡೌನ್​ ಶುರು. ಅಲ್ಲಿಂದ ನಿಮ್ಮ ಆಟ ನಡೆಯುವುದಿಲ್ಲ. ಸುಮ್ಮನೇ ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಚೆನ್ನಾಗಿರುತ್ತೀರಾ, ಅದನ್ನು ಬಿಟ್ಟು ನಿಮ್ಮ ಕ್ರಿಮಿನಲ್​ ಚಟುವಟಿಕೆಯನ್ನು ಮುಂದುವರಿಸಿದರೆ ಅದೇ ಕೊನೆ. ಇದು ನಿಮಗೆ ನೀಡುತ್ತಿರುವ ಅಂತಿಮ ಎಚ್ಚರಿಕೆ ಎಂದು ಯೋಗಿ ಆದಿತ್ಯನಾಥ ಅವರು ಹೇಳಿದ್ದು, ಈ ವಿಡಿಯೋ ಜಾಲತಾಣದಲ್ಲಿ ಭಾರಿ ಶೇರ್​ ಆಗುತ್ತಿದೆ.

ಇಲ್ಲಿದೆ ಕೇಳಿ ವಿಡಿಯೋ...