More

    ಏಳೇಳು ದಾಖಲೆಗಳ ಸರದಾರ ಯೋಗಿ ಆದಿತ್ಯನಾಥ: 37 ವರ್ಷಗಳಲ್ಲಿ ಅಧಿಕಾರ ಉಳಿಸಿಕೊಂಡ ಮೊದಲ ಸಿಎಂ

    ನವದೆಹಲಿ: ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮತ್ತೊಮ್ಮೆ ಗದ್ದುಗೆ ಏರಲು ತಯಾರಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಆದಿತ್ಯನಾಥ ಅವರು ಏಳು ದಾಖಲೆಗಳನ್ನು ತಮ್ಮ ತೆಕ್ಕಗೆ ಹಾಕಿಕೊಂಡಿದ್ದಾರೆ.

    ಏನಿವು ಏಳು ದಾಖಲೆಗಳು?
    1) ಉತ್ತರ ಪ್ರದೇಶದ ಮೊದಲ ವಿಧಾನಸಭೆ ಮೇ 20, 1952ರಂದು ರಚನೆಯಾಯಿತು. ಈ 70 ವರ್ಷಗಳಲ್ಲಿ ರಾಜ್ಯವು 21 ಮುಖ್ಯಮಂತ್ರಿಗಳನ್ನು ಕಂಡಿದೆ. ಯೋಗಿ ಆದಿತ್ಯನಾಥ ಅವರು 70 ವರ್ಷಗಳ ಉತ್ತರ ಪ್ರದೇಶ ಚುನಾವಣಾ ಇತಿಹಾಸದಲ್ಲಿ ಐದು ವರ್ಷಗಳ ಪೂರ್ಣ ಅಧಿಕಾರಾವಧಿಯನ್ನು ಪೂರ್ಣಗೊಳಿಸಿ, ಸತತ ಎರಡನೇ ಅವಧಿಗೆ ಆಯ್ಕೆಯಾದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ.

    2) ಇಲ್ಲಿಯವರೆಗೆ ಉತ್ತರ ಪ್ರದೇಶದಲ್ಲಿ ಕೇವಲ ಐವರು ಮುಖ್ಯಮಂತ್ರಿಗಳು ಸತತ ಎರಡನೇ ಅವಧಿಗೆ ಅಧಿಕಾರ ಹಿಡಿದಿದ್ದಾರೆ. ಅವಿಭಜಿತ ಉತ್ತರ ಪ್ರದೇಶ ಸಮಯದಲ್ಲಿ 1985 ರಲ್ಲಿ ಕಾಂಗ್ರೆಸ್‌ನ ನಾರಾಯಣ ದತ್ತ ತಿವಾರಿ ಅಧಿಕಾರ ಉಳಿಸಿಕೊಂಡ ಕಡೆಯ ಮುಖ್ಯಮಂತ್ರಿ. 1957 ರಲ್ಲಿ ಸಂಪೂರ್ಣಾನಂದ, 1962 ಚಂದ್ರಭಾನು ಗುಪ್ತಾ, 1974 ರಲ್ಲಿ ಹೇಮಾವತಿ ನಂದನ್ ಬಹುಗುಣ ಅಧಿಕಾರ ಎರಡನೇ ಬಾರಿಗೆ ಉಳಿಸಿಕೊಂಡಿದ್ದರು. ಈಗ ಯೋಗಿ ಆದಿತ್ಯನಾಥ್ ಅವರು ಐದನೇ ಮುಖ್ಯಮಂತ್ರಿಯಾಗಿ ಮಿಂಚಿದ್ದಾರೆ.

    3) ಕಾಂಗ್ರೆಸ್‌ನ ಎನ್‌.ಡಿ ತಿವಾರಿ ಅವರು 1985ರಲ್ಲಿ ಅವಿಭಜಿತ ಉತ್ತರ ಪ್ರದೇಶದಲ್ಲಿ ಚುನಾವಣೆ ಎದುರಿಸಿದಾಗ ರಾಜ್ಯದ ಮಖ್ಯಮಂತ್ರಿಯಾಗಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ತಿವಾರಿ ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಆ ಬಳಿಕ ಸತತ 2ನೇ ಅವಧಿಗೆ ಯಾರೂ ಈ ಸ್ಥಾನ ಏರಿರಲಿಲ್ಲ. ಇದೀಗ ಯೋಗಿ ಆದಿತ್ಯನಾಥ ಅವರು 37 ವರ್ಷಗಳ ಬಳಿಕ ಈ ಸಾಧನೆ ಮಾಡುತ್ತಿದ್ದಾರೆ.

    4) ಉತ್ತರ ಪ್ರದೇಶ ಇದುವರೆಗೆ ನಾಲ್ವರು ಬಿಜೆಪಿ ಮುಖ್ಯಮಂತ್ರಿಗಳನ್ನು ಕಂಡಿದೆ. ಅವರೆಂದರೆ ಕಲ್ಯಾಣ್ ಸಿಂಗ್, ರಾಮ್ ಪ್ರಕಾಶ್ ಗುಪ್ತಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್. ಆದರೆ ವಿಶೇಷ ಎಂದರೆ ಅವರಲ್ಲಿ ಯಾರೂ ಸತತ ಎರಡನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಂಡಿರಲಿಲ್ಲ. ಇದೀಗ ಯೋಗಿ ಆದಿತ್ಯನಾಥ ಅವರು ಎರಡನೆಯ ಬಾರಿ ಸಿಎಂ ಪಟ್ಟ ಏರಲಿದ್ದು, ಮೊದಲಿಗ ಎನಿಸಿಕೊಂಡಿದ್ದಾರೆ.

    5) ಗೋರಖ್​ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ ಅವರು ಸ್ಪರ್ಧಿಸಿದ್ದು, ಎರಡನೆಯ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರೆ 15 ವರ್ಷಗಳ ಬಳಿಕ ವಿಧಾನಸಭೆಯಿಂದ ಆಯ್ಕೆಯಾದ ಶಾಸಕರೊಬ್ಬರು ಸಿಎಂ ಆದಂತಾಗಲಿದೆ. 2007-2012ರಲ್ಲಿ ಮಾಯಾವತಿ, 2012-2017ರ ಅವಧಿಯಲ್ಲಿ ಅಖಿಲೇಶ್ ಯಾದವ್ ಎಂಎಲ್‌ಸಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದರು. 2017ರ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆಗಿ ಆಯ್ಕೆಯಾಗಿದ್ದರು. ಅದಕ್ಕೂ ಮುನ್ನ ಅವರು ಗೋರಖ್​ಪುರ ಕ್ಷೇತ್ರದ ಸಂಸದರಾಗಿದ್ದರು. ಸಿಎಂ ಆದ ಬಳಿಕ ಅವರು ಆರು ತಿಂಗಳಲ್ಲಿ ಶಾಸಕರಾಗಬೇಕಿತ್ತು. ಅದಕ್ಕಾಗಿ ಅವರು ವಿಧಾನಸಭೆ ಮೊರೆ ಹೋಗದೇ ಪರಿಷತ್ ಮೂಲಕ ಆಯ್ಕೆಯಾಗಿದ್ದರು.

    6) ಬಿಜೆಪಿ ಈವರೆಗೂ ಉತ್ತರ ಪ್ರದೇಶದಲ್ಲಿ ನಾಲ್ಕು ಸಿಎಂಗಳನ್ನು ಕಂಡಿದೆ. ಯೋಗಿ ಆದಿತ್ಯನಾಥ್‌ಗೂ ಮುನ್ನ ಕಲ್ಯಾಣ್ ಸಿಂಗ್, ರಾಮ್ ಪ್ರಕಾಶ್ ಗುಪ್ತಾ, ಹಾಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಮೂವರು ನಾಯಕರು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದಿಲ್ಲ. ಈ ಫಲಿತಾಂಶ ಮೂಲಕ ಬಿಜೆಪಿಯನ್ನು ಎರಡನೇ ಬಾರಿ ಅಧಿಕಾರಕ್ಕೆ ತಂದ ಮೊದಲ ಸಿಎಂ ಆಗಿದ್ದಾರೆ.

    7) ನೊಯ್ಡಾಗೆ ಭೇಟಿಗೆ ನೀಡಿದ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಉತ್ತರ ಪ್ರದೇಶದ ರಾಜಕೀಯದಲ್ಲಿದೆ. ಈ ಕಾರಣಕ್ಕೆ ಹಿಂದೆ ಅಖಿಲೇಶ್ ಯಾದವ್ ಸೇರಿದಂತೆ ಹಲವು ಸಿಎಂಗಳು ನೊಯ್ಡಾಗೆ ತಮ್ಮ ಅಧಿಕಾರದ ಅವಧಿಯಲ್ಲಿ ಭೇಟಿ ನೀಡಿರಲಿಲ್ಲ. ಆದರೆ ಯೋಗಿ ಆದಿತ್ಯನಾಥ್ ತಮ್ಮ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ. ಆದರೂ ಸಿಎಂ ಸ್ಥಾನ ಉಳಿಸಿಕೊಂಡಿದ್ದಾರೆ.

    ಯಾರೂ ಕಾಲಿಡದ ಜಾಗಕ್ಕೆ ಭೇಟಿ ನೀಡಿ ಗೆದ್ದು ಬೀಗಿದ ಯೋಗಿ: 29 ವರ್ಷಗಳ ನಂಬಿಕೆಯೇ ಸುಳ್ಳಾಗೋಯ್ತು!

    ಹಾಸ್ಯಗಾರನಿಗೆ ಒಲಿದ ಪಂಜಾಬ್​ ಗದ್ದುಗೆ: ಅಮ್ಮ ಹೇಳಿದ್ದು ನಿಜವಾಯ್ತು… ಕುಡುಕ ಎಂದವರಿಗೆ ಮುಖಭಂಗವಾಯ್ತು

    ಎರಡೆರಡು ಬಾರಿ ಸಿಎಂ ಆಗಿದ್ದ ಅಮರೀಂದರ್​ ಸಿಂಗ್​ಗೆ ಸೋಲು: ಹೊಸ ಪಕ್ಷಕ್ಕೆ ಕೈ ಹಿಡಿಯದ ಮತದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts