ನ್ಯೂಸ್

ಮಗನ ಬದಲು ನಾಯಿಯ ಹೆಸರಿಗೆ ಕೋಟ್ಯಂತರ ರೂಪಾಯಿ ಆಸ್ತಿ ಬರೆದ ರೈತ!

ಚಿಂದ್ವಾರಾ (ಮಧ್ಯಪ್ರದೇಶ): ನಾಯಿ ನಿಷ್ಠೆಗೆ ನಾಯಿಗೇ ಸಾಟಿ. ಅಂಥದ್ದೊಂದು ನಿಷ್ಠಾವಂತ ಪ್ರಾಣಿ ಯಾವುದೂ ಇಲ್ಲ ಎಂದೇ ಹೇಳಲಾಗುತ್ತದೆ. ಇದೇ ಕಾರಣಕ್ಕೆ ಎಷ್ಟೋ ಮಂದಿಗೆ ಮನುಷ್ಯರಿಗಿಂತಲೂ ಹೆಚ್ಚಾಗಿ ತಮ್ಮ ಸಾಕುನಾಯಿಗಳ ಮೇಲೆ ಪ್ರೀತಿ.

ಅಂಥದ್ದೇ ಒಂದು ಪ್ರೀತಿ ಮೆರೆದಿದ್ದಾರೆ ಮಧ್ಯಪ್ರದೇಶದ ಚಿಂದ್ವಾರಾದ ಬಡಾ ಗ್ರಾಮದ ರೈತ 50 ವರ್ಷದ ಓಂ ನಾರಾಯಣ್ ವರ್ಮಾ. ಸಿರಿವಂತರಾಗಿರುವ ಇವರು, ತಮ್ಮ ಕೋಟ್ಯಂತರ ರೂಪಾಯಿ ಆಸ್ತಿಯನ್ನು 11 ತಿಂಗಳ ನಾಯಿ ಜಾಕಿ ಹೆಸರಿಗೆ ವಿಲ್​ ಮಾಡಿಸಿದ್ದು, ಉಳಿದ ಆಸ್ತಿಯನ್ನು ತಮ್ಮ ಎರಡನೆಯ ಪತ್ನಿ ಚಂಪಾ ಅವರ ಹೆಸರಿಗೆ ಮಾಡಿಸಿದ್ದಾರೆ.

ಇದರಲ್ಲಿ 21 ಎಕರೆ ಕೋಟ್ಯಂತರ ಬೆಲೆ ಬಾಳುವ ತೋಟವಿದ್ದು, ಇನ್ನೂ ಕೆಲವು ಆಸ್ತಿಗಳು ಸೇರಿವೆ. ಕಳೆದ ವಾರ ಇಬ್ಬರ ಹೆಸರಿಗೂ ವಿಲ್​ ಮಾಡಿಸಿದ್ದಾರೆ ನಾರಾಯಣ್​.

ಅಂದಹಾಗೆ ಇವರಿಗೆ ಮಕ್ಕಳು ಇಲ್ಲವೆಂದಲ್ಲ. ಒಬ್ಬ ಮಗ ಇದ್ದಾನೆ. ಆದರೆ ಆತನ ನಡವಳಿಕೆ ಇವರಿಗೆ ಸರಿಕಂಡುಬಂದಿಲ್ಲ. ನನ್ನನ್ನು ಇಲ್ಲಿಯವರೆಗೆ ನೋಡಿಕೊಳ್ಳುತ್ತಿರುವುದು ನನ್ನ ಚಂಪಾ ಹಾಗೂ ನನ್ನ ನಾಯಿ ಜಾಕಿ. ಇವರಿಬ್ಬರನ್ನು ಬಿಟ್ಟರೆ ಯಾರ ಮೇಲೂ ನನಗೆ ನಂಬಿಕೆ ಇಲ್ಲ. ನನ್ನ ಸಾವಿನ ನಂತರ ಜಾಕಿ ಅನಾಥವಾಗಬಾರದು. ಅದನ್ನು ನನ್ನ ಪತ್ನಿ ನೋಡಿಕೊಳ್ಳುವ ಭರವಸೆ ನನಗೆ ಇದೆ. ಆದ್ದರಿಂದ ಯಾವುದೇ ಕಾರಣಕ್ಕೂ ನನ್ನ ಬಳಿಕ ಇಬ್ಬರಿಗೂ ಅನ್ಯಾಯ ಆಗಬಾರದು ಎಂದು ಅವರ ಹೆಸರಿಗೆ ವಿಲ್​ ಮಾಡಿಸಿದ್ದೇನೆ ಎಂದಿದ್ದಾರೆ ನಾರಾಯಣ್​.

ನಾಯಿಯ ಹೆಸರಿನಲ್ಲಿ ಇರುವ ಆಸ್ತಿ ಯಾರಿಗೆ ಎಂಬ ಬಗ್ಗೆಯೂ ವಿಲ್​ನಲ್ಲಿ ತಿಳಿಸಿರುವ ಅವರು, ನನ್ನ ಮರಣದ ನಂತರ ನನ್ನ ಜೀವದ ಗೆಳೆಯನಾಗಿರುವ ಜಾಕಿಗೆ ಯಾವುದೇ ಅನಾಹುತ ಸಂಭವಿಸಬಾರದು. ನನ್ನ ಪತ್ನಿ ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎನ್ನುವ ಭರವಸೆ ಇದೆ. ಈ ನಾಯಿಯನ್ನು ಯಾರು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೋ ಅವರೇ ಅದರ ಹೆಸರಿನಲ್ಲಿ ಇರುವ ಆಸ್ತಿಯ ಉತ್ತರಾಧಿಕಾರಿಯಾಗುತ್ತಾರೆ ಎಂದು ವಿಲ್​ನಲ್ಲಿ ಬರೆಸಿದ್ದಾರೆ.

ಈ ವಿಲ್​ ಬದಲಾಯಿಸುವಂತೆ ಗ್ರಾಮದ ಮುಖಂಡರಿಂದ ಒತ್ತಾಯ ಬಂದಿದೆ. ಆದರೆ ಯಾವುದೇ ಕಾರಣಕ್ಕೂ ನಾನು ವಿಲ್​ ಬದಲಾಯಿಸುವುದಿಲ್ಲ ಎಂದು ಖಡಾಖಂಡಿತವಾಗಿ ನಾರಾಯಣ್​ ಹೇಳಿದ್ದಾರೆ.