ನ್ಯೂಸ್

ಹೀಗೂ ಉಂಟು! ಮೊಬೈಲ್‍ನಲ್ಲಿ ಮೊರೆ ಕೇಳಿ ವರ ನೀಡ್ತಾನಂತೆ ಈ ಗಣಪ...

suchetana

ನಮ್ಮ ಸುತ್ತಮುತ್ತಲೂ ಹಲವಾರು ವಿಚಿತ್ರ ಸಂಗತಿಗಳು, ಪದ್ಧತಿ-ಆಚರಣೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ಪದ್ಧತಿಗಳು ನಗು ತರಿಸುವಂತಿದ್ದರೂ, ತಲೆತಲಾಂತರಗಳಿಂದ ನಡೆದುಕೊಂಡು ಬರುತ್ತಿವೆ.

ಅಂಥದ್ದರಲ್ಲಿ ಒಂದು ಇಂದೋರ್​ನಲ್ಲಿರುವ ಜುನಾ ಚಿಂತಾಮಣ್ ಗಣೇಶ. ಈ ಗಣೇಶನ ವಿಶೇಷತೆ ಎಂದರೆ ಮೊಬೈಲ್‍ನಲ್ಲಿಯೇ ಭಕ್ತರ ಮನವಿ ಆಲಿಸಿ, ಅಲ್ಪ ಸಮಯದಲ್ಲಿಯೇ ಇಷ್ಟಾರ್ಥ ನೆರವೇರಿಸುತ್ತಾನಂತೆ! ಹೀಗೆಂದು ಭಕ್ತರ ಅನಿಸಿಕೆ.

ಅಂದಹಾಗೆ ಇದು ಕರೊನಾ ಕಾಲ. ಕರೊನಾದಿಂದಾಗಿ ಭಯಪಟ್ಟು ಗಣೇಶ ಹೀಗೆ ಮಾಡುತ್ತಾನೆ ಎಂದುಕೊಂಡರೆ ಅದು ತಪ್ಪು. ಏಕೆಂದರೆ ಈ ಗಣೇಶ ಮೊಬೈಲ್​ ಶುರುವಾದಾಗಿನಿಂದಲೂ ತಮ್ಮ ಮನವಿಯನ್ನು ಮೊಬೈಲ್​ನಲ್ಲಿಯೇ ಆಲಿಸುತ್ತಾನೆ ಎಂದು ಹಲವು ಭಕ್ತರು ಅನಿಸಿಕೆ ವ್ಯಕ್ತಪಡಿಸುತ್ತಾರೆ.

ತಮ್ಮ ಇಷ್ಟಾರ್ಥ ಸಿದ್ಧಿಗೆ ಹರಕೆ ಸಲ್ಲಿಸಿ ಅದು ಈಡೇರುವಷ್ಟು ಹೊತ್ತು ಕಾಯುವಷ್ಟು ಪುರುಸೊತ್ತು ಭಕ್ತರಿಗೆ ಇಲ್ಲ ಎಂದುಕೊಂಡೋ ಏನೋ, ಒಟ್ಟಿನಲ್ಲಿ ಈ ಗಣೇಶ ಮೊಬೈಲ್​ಪ್ರಿಯ.

ಅಂದಹಾಗೆ, ಈ ದೇವಾಲಯ ಸುಮಾರು 1200 ವರ್ಷ ಹಳೆಯದ್ದು. ಮೊದಲೆಲ್ಲಾ ಮನಸ್ಸಿನಲ್ಲಿ ಕೋರಿಕೆ ಸಲ್ಲಿಸಿ ಹೋಗುತ್ತಿದ್ದ ಭಕ್ತರು ಸುಮಾರು 30-35 ವರ್ಷಗಳಿಂದ ಪತ್ರ ಮುಖೇನ ಮನವಿ ಸಲ್ಲಿಸುತ್ತಿದ್ದರು. ಆದರೀಗ ಫೋನ್​ ಕರೆಗಳೇ ಹೆಚ್ಚು ಬರುತ್ತಿವೆಯಂತೆ. (ಮೇಲೆ ತೋರಿಸಿರುವ ಚಿತ್ರದಲ್ಲಿ ಇರುವುದು ಇದೇ ಗಣಪತಿ ದೇವಾಲಯ)

ಭಕ್ತರು ಕರೆ ಮಾಡಿದಾಗ ದೇವಾಲಯದ ಪೂಜಾರಿ ಕರೆ ಸ್ವೀಕರಿಸಿ ದೇವರ ಕಿವಿ ಬಳಿ ಹಿಡಿಯುತ್ತಾರೆ. ಭಕ್ತ ನೇರವಾಗಿ ತನ್ನ ಕಷ್ಟ ಕಾರ್ಪಣ್ಯಗಳನ್ನು ದೇವರಲ್ಲಿ ಹೇಳಿಕೊಳ್ಳುತ್ತಾನೆ. ಇದರಿಂದ ಕಷ್ಟಗಳೆಲ್ಲಾ ದೂರವಾಗಿರುವ ಉದಾಹರಣೆಗಳೂ ಇವೆಯಂತೆ. ಇದಕ್ಕಾಗಿಯೇ ಈ ದೇವರಿಗೀಗ ಫಾರಿನ್​ನಿಂದಲೂ ಕರೆಗಳು ಬರುತ್ತಿವೆಯಂತೆ!