ನ್ಯೂಸ್

100% ಡಿಜಿಟಲ್‌ ಆಯ್ತು ದುಬೈ! ಕಚೇರಿಯಲ್ಲಿ ಪೇಪರ್‌ ಮುಟ್ಟೋ ಮಾತೇ ಇಲ್ಲ... 2.65 ಲಕ್ಷ ಕೋಟಿ ಉಳಿತಾಯ!

suchetana

ದುಬೈ: ಇದು ಡಿಜಿಟಲ್‌ ಯುಗ. ಎಲ್ಲವೂ ಡಿಜಿಟಲ್‌ ಮಯ ಎಂದು ಎಷ್ಟೇ ಹೇಳಿದರೂ ಸರ್ಕಾರಿ ಕಚೇರಿಗಳಿಗೆ ಹೋದರೆ ಪೇಪರ್‌ಗಳ ರಾಶಿ ರಾಶಿ ಕಾಣಸಿಗುತ್ತದೆ. ಧೂಳು ಹಿಡಿದು ಕುಳಿತಿರುವ ದಶಕಗಳ ಹಿಂದಿನ ಪೇಪರ್‌ ದಾಖಲೆಗಳಿಗೆ ಲೆಕ್ಕವೇ ಇಲ್ಲ.

ಆದರೆ ಇದೀಗ ಇಡೀ ದೇಶದಲ್ಲಿಯೇ ಸರ್ಕಾರಿ ಕಚೇರಿಗಳಲ್ಲಿ ಒಂದೇ ಒಂದು ಪೇಪರ್‌ ಕಾಣಲುಸಿಗುವುದಿಲ್ಲ, ಎಲ್ಲವೂ ಡಿಜಿಟಲ್‌. ಆ ದೇಶ ದುಬೈ. ವಿಶ್ವದ ಮೊದಲ ಪೇಪರ್‌ಲೆಸ್‌ ಸರ್ಕಾರ ದುಬೈ ಆಗಿದೆ. ಶೇ.100ರಷ್ಟು ಕಾಗದರಹಿತ ಆಡಳಿತ ಜಾರಿ ಮಾಡಿದ ವಿಶ್ವದ ಮೊದಲ ದೇಶ ಎಂಬ ಖ್ಯಾತಿಗೆ ದುಬೈ ಪಾತ್ರವಾಗಿದೆ. ಈ ಕುರಿತು ಯುವರಾಜ ಶೇಖ್ ಹಮದ್ ಬಿನ್ ಮಹಮ್ಮದ್ ಬಿನ್ ರಶೀದ್ ಆಲ್ ಮುಕ್ತುಮ್ ಘೋಷಣೆ ಮಾಡಿದ್ದಾರೆ.

ಇನ್ಮುಂದೆ ದುಬೈ ಸರ್ಕಾರದ ಎಲ್ಲಾ ಆಂತರಿಕ ಮತ್ತು ಬಾಹ್ಯ ವಹಿವಾಟು ಮತ್ತು ಕಾರ್ಯ ವಿಧಾನಗಳು ಶೇ.100ರಷ್ಟು ಡಿಜಿಟಲ್ ಆಗಿರಲಿದೆ. ದುಬೈನಲ್ಲಿ ಕಾಗದರಹಿತ ಆಡಳಿತವನ್ನು 5 ಹಂತಗಳ ಮೂಲಕವಾಗಿ ಅಳವಡಿಸಿಕೊಳ್ಳಲಾಗಿದೆ. 5ನೇ ಹಂತದ ವೇಳೆಗೆ ದುಬೈನ ಎಲ್ಲಾ 45 ಸರ್ಕಾರಿ ಘಟಕಗಳ ಕಾರ್ಯತಂತ್ರವನ್ನು ಸಂಪೂರ್ಣವಾಗಿ ಕಾಗದರಹಿತ ಮಾಡಲಾಗಿದೆ ಎಂದಿದ್ದಾರೆ.

ಈ ಒಂದು ಸಾಧನೆಯಿಂದಾಗಿ ದುಬೈ ಸರ್ಕಾರಕ್ಕೆ 2.65 ಲಕ್ಷ ಕೋಟಿ ಹಣ ಉಳಿತಾಯವಾಗಲಿದೆ. ಪೇಪರ್‌ ಕೆಲಸ ಇಲ್ಲದ ಕಾರಣ 1.4ಲಕ್ಷ ಕೋಟಿ ಮಾನವ ಗಂಟೆಗಳನ್ನು ಉಳಿತಾಯವಾಗಿದೆ.

ಇದರಿಂದ ದುಬೈ ನಿವಾಸಿಗಳ ನಿರೀಕ್ಷೆಗಳನ್ನು ಪೂರೈಸಲು ಸರ್ಕಾರಕ್ಕೆ ನೆರವಾಗುತ್ತದೆ, ಶೀಘ್ರದಲ್ಲಿ ಎಲ್ಲಾ ಕಡತಗಳ ವಿಲೇವಾರಿ ಆಗುತ್ತದೆ ಎಂದು ಶೇಖ್ ಹಮದ್ ತಿಳಿಸಿದ್ದಾರೆ.