More

    LIVE: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಕಾಶಿ: 339 ಕೋಟಿ ರೂ.ವೆಚ್ಚದ ಕಾರಿಡಾರ್‌ಗೆ ಪ್ರಧಾನಿ ಚಾಲನೆ

    ವಾರಾಣಸಿ: ಹಿಂದುಗಳ ಪವಿತ್ರ ಕ್ಷೇತ್ರ ವಾರಾಣಸಿಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕಾಶಿ ವಿಶ್ವನಾಥ ಕಾರಿಡಾರ್‌ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿದೆ. ಸುಮಾರು 339 ಕೋಟಿ ರೂ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸುತ್ತಿದ್ದಾರೆ. ಕಾಲಭೈರೇಶ್ವರನಿಗೆ ಮಂಗಳಾರತಿ ಸಲ್ಲಿಸಿ, ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ನದಿಯಲ್ಲಿ ರುದ್ರಾಕ್ಷಿ ಮಾಲೆ ಹಿಡಿದು ಮಂತ್ರಪಠಣೆ ಮಾಡಿದ ನಂತರ  ಪ್ರಧಾನಿ ಮೋದಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ಸುಮಾರು 5 ಲಕ್ಷ ಚದರ ಅಡಿಯ ಬೃಹತ್ ಪ್ರದೇಶದಲ್ಲಿ ಇದನ್ನು ನಿರ್ಮಿಸಲಾಗಿದೆ. ಇಲ್ಲಿ 40ಕ್ಕೂ ಹೆಚ್ಚು ಪುರಾತನ ದೇವಾಲಯಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಹಳೆಯ ಕಟ್ಟಡಗಳಿಗೆ ಮೆರುಗು ನೀಡಲಾಗಿದೆ. ದೇಶ-ವಿದೇಶಗಳಿಂದ ಬರುವ ಭಕ್ತರಿಗೆ ವಿವಿಧ ಬಗೆಯ ಸೌಲಭ್ಯಗಳನ್ನು ಒದಗಿಸಲು 23 ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಯಾತ್ರಿ ಸುವಿಧಾ ಕೇಂದ್ರಗಳು, ಪ್ರವಾಸಿ ಸೌಲಭ್ಯ ಕೇಂದ್ರ, ವೇದಿಕ್ ಕೇಂದ್ರ, ಮುಮುಕ್ಷು ಭವನ, ಭೋಗಶಾಲಾ, ಸಿಟಿ ಮ್ಯೂಸಿಯಂ, ಪ್ರದರ್ಶನ ಗ್ಯಾಲರಿಗಳು, ಆಹಾರ ಮಳಿಗೆ ಮುಂತಾದವು ಇದರಲ್ಲಿ ಸೇರಿವೆ.

    ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಈ ಮಹತ್ವದ ಯೋಜನೆಯ ಲೋಕಾರ್ಪಣೆ ಸಲುವಾಗಿ ಕಂಗೊಳಿಸುವ ದೀಪಾಲಂಕಾರಗಳನ್ನು ಮಾಡಲಾಗಿದೆ. ಈ ಐತಿಹಾಸಿಕ ಕ್ಷಣದ ಹಿನ್ನೆಲೆಯಲ್ಲಿ ಕಾಶಿಯ ಪ್ರತಿಯೊಂದು ರಸ್ತೆಯನ್ನೂ ಸಿಂಗರಿಸಲಾಗಿದ್ದು, ವಿಶ್ವನಾಥ ದೇಗುಲಕ್ಕೆ ಸಾಗುವ ರಸ್ತೆಗಳಲ್ಲಿರುವ ಕಟ್ಟಡಗಳಿಗೆ ತೆಳು ಗುಲಾಬಿ ಬಣ್ಣವನ್ನು ಬಳಿಯಲಾಗಿದೆ. ದ್ವಾದಶ ಜ್ಯೋತಿರ್ಲಿಂಗಗಳನ್ನು ವಿದ್ಯುತ್ ದೀಪಾಲಂಕಾರ ದಲ್ಲಿ ಮೂಡಿಸಲಾಗಿದೆ. ಮೋದಿಯವರ ಆಳೆತ್ತರದ ಫ್ಲೆಕ್ಸ್ ಗಳು ರಾರಾಜಿಸಿವೆ. ಹೋಟೆಲ್, ಮಳಿಗೆಗಳ ಮಾಲೀಕರು ಮತ್ತು ಉದ್ಯಮಿಗಳು ಸ್ವಇಚ್ಛೆಯಿಂದ ತಮ್ಮ ಕಟ್ಟಡಗಳನ್ನು, ವೃತ್ತಗಳನ್ನು ಸಿಂಗರಿಸಲಾಗಿದೆ.

    ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು, ವಿವಿಧ ಧರ್ಮಗಳ ಮೂರು ಸಾವಿರ ಸ್ವಾಮೀಜಿಗಳು, ಎರಡು ಸಾವಿರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಉತ್ತರ ಪ್ರದೇಶದ ಪೊಲೀಸ್ ಅಲ್ಲದೆ, ಅರೆ ಸೇನಾಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಡ್ರೋನ್ ಮೂಲಕ ನಿಗಾ ಇರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಕಾಶಿ ವಿಶ್ವನಾಥ ದೇವರ ಸುಗಮ ಮತ್ತು ಸುರಕ್ಷಿತ ದರ್ಶನ ಹಾಗೂ ಪೂಜೆಗಾಗಿ ಮೂರು ಪ್ರಯಾಣಿಕ ಸೌಲಭ್ಯ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಲಾಕರ್‌ಗಳು, ಟಿಕೆಟ್ ಕೌಂಟರ್‌ಗಳು, ಅಂಗಡಿಗಳಂತಹ ಸೌಲಭ್ಯಗಳು ಸಿಗಲಿವೆ.

    ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿಯವರು ‘ಕ್ರೂಸ್ ಬೈಠಕ್’ (ದೋಣಿ ವಿಹಾರ) ಮತ್ತು ಗಂಗಾರತಿಯಲ್ಲಿ ಭಾಗಿಯಾಗಲಿದ್ದಾರೆ. ದೋಣಿ ವಿಹಾರದಲ್ಲಿ ಕಾಶಿಯ ಪ್ರಮುಖ ಘಾಟ್​ಗಳ ದರ್ಶನವನ್ನು ಅವರು ಮಾಡಲಿದ್ದಾರೆ. ಜತೆಗೆ ಸಿಎಂ ಮತ್ತು ಉಪಮುಖ್ಯಮಂತ್ರಿಗಳ ಜತೆ ಅನೌಪಚಾರಿಕ ಮಾತುಕತೆಯನ್ನೂ ನಡೆಸಲಿದ್ದಾರೆ. ಘಾಟ್​ಗಳಲ್ಲಿ ಐದು ಲಕ್ಷ ದೀಪಗಳನ್ನು ಹಚ್ಚಲು ವ್ಯವಸ್ಥೆ ಮಾಡಲಾಗಿದೆ.

    ಕಾರ್ಯಕ್ರಮ ನೇರ ಪ್ರಸಾರ ವೀಕ್ಷಣೆಗೆ ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. (ಕೃಪೆ ದೂರದರ್ಶನ)

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts