More

    ದೊಡ್ಡಜಾತ್ರೆ ಮಹೋತ್ಸವಕ್ಕೆ ಸಕಲ ಸಿದ್ಧತೆ


    ನಂಜನಗೂಡು : ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕಂಠೇಶ್ವರಸ್ವಾಮಿ ದೇವಾಲಯದಲ್ಲಿ ದೊಡ್ಡ ಜಾತ್ರಾ ಮಹೋತ್ಸವ ಅಂಗವಾಗಿ ಮಾ. 22 ರಂದು ಮುಂಜಾನೆ ಜರುಗುವ ಗೌತಮ ಪಂಚ ಮಹಾ ರಥೋತ್ಸವಕ್ಕಾಗಿ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.


    ಶುಕ್ರವಾರ ಬೆಳಗ್ಗೆ 6.30 ರಿಂದ 6.50 ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀಮನ್ಮಹಾಗೌತಮ ರಥಾರೋಹಣದೊಂದಿಗೆ ದೊಡ್ಡಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರಲಿದೆ. ಭಕ್ತರಿಗೆ ದಾಸೋಹ ಭವನದಲ್ಲಿ ಅಗತ್ಯ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.


    89 ಅಡಿ ಎತ್ತರದ ಗೌತಮ ರಥದ ವಿನ್ಯಾಸ, ಮರಮುಟ್ಟು ಜೋಡಣೆ, ಚಕ್ರಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಸಿದ್ಧತಾ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಗೌತಮ ರಥದ ತುದಿಯಲ್ಲಿ ಕಳಸ ಪ್ರತಿಷ್ಠಾಪನೆ ಮಾಡಿ ವರ್ಣಾಲಂಕಾರಿಕ ಬಟ್ಟೆ, ನೇತಾಡುವ ದಿಂಬುಗಳ ಜೋಡಣೆ ಸೇರಿದಂತೆ ರಥಗಳ ಸಿಂಗಾರಕ್ಕೆ ಅಂತಿಮ ಸ್ಪರ್ಶ ನೀಡಲಾಗಿದೆ.


    ರಥೋತ್ಸವದಲ್ಲಿ ಸಾಗುವ ಉಳಿದ ನಾಲ್ಕು ರಥಗಳಾದ ಪಾರ್ವತಿದೇವಿ, ಗಣಪತಿ, ಚಂಡೀಕೇಶ್ವರ ಹಾಗೂ ಸುಬ್ರಹ್ಮಣ್ಯ ರಥಗಳ ಅಲಂಕಾರ ಕಾರ್ಯವೂ ಕೂಡ ಅಂತಿಮ ರೂಪ ಪಡೆದುಕೊಳ್ಳುತ್ತಿವೆ. ಪಂಚ ರಥಗಳು ಚಲಿಸಲು ಯೋಗ್ಯ ಇವೆಯೇ ಎಂಬುದನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರಮಾಣ ಪತ್ರ ನೀಡಲು ಬುಧವಾರ ಸಂಜೆ ಪರಿಶೀಲನೆ ನಡೆಸಿದರು ಮುನ್ನೆಚ್ಚರಿಕಾ ಕ್ರಮವಾಗಿ ರಥ ಎಳೆಯುವ ಹಗ್ಗವನ್ನು ಹೆಚ್ಚುವರಿಯಾಗಿ ಖರೀದಿಸಲಾಗಿದೆ.


    ದೊಡ್ಡ ಜಾತ್ರೆ ಆಕರ್ಷಣೆ ಹೆಚ್ಚಿಸಲು ಶ್ರೀಕಂಠೇಶ್ವರಸ್ವಾಮಿ ದೇಗುಲ ಸೇರಿದಂತೆ ನಗರದ ಎಲ್ಲ ಸರ್ಕಾರಿ ಕಚೇರಿ, ಪ್ರಮುಖ ವೃತ್ತಗಳು, ಶ್ರೀಕಂಠೇಶ್ವರಸ್ವಾಮಿ ದೇವಾಲಯ, ಸಮುಚ್ಛಯ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಜಾತ್ರೆ ವೇಳೆ ಪ್ರಸಾದ ವಿನಿಯೋಗ ಮಾಡುವ ಸೇವಾರ್ಥದಾರರಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ. ಮಾ.24 ರಂದು ಸಂಜೆ 7 ಗಂಟೆಗೆ ಕಪಿಲಾ ನದಿಯಲ್ಲಿ ಅಲಂಕೃತ ಉತ್ಸವಮೂರ್ತಿಯ ತೆಪ್ಪೋತ್ಸವ, ಮಾ.26 ರಂದು ನಂದಿ ವಾಹನೋತ್ಸವದೊಂದಿಗೆ ದೊಡ್ಡಜಾತ್ರೆಗೆ ತೆರೆ ಬೀಳಲಿದೆ.


    ಭಕ್ತರಿಗೆ ಅಗತ್ಯ ನೆರವು :
    ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ತಾಲೂಕು ಆಡಳಿತ ಸಕಲ ತಯಾರಿ ನಡೆಸಿದೆ. ದೇವಾಲಯ ಆವರಣ, ಕಪಿಲಾ ಸ್ನಾನಘಟ್ಟ ಹಾಗೂ ಪರಶುರಾಮ ದೇವಾಲಯದ ಬಳಿ 200 ತಾತ್ಕಾಲಿಕ ಶೌಚಗೃಹ ಹಾಗೂ ಸ್ನಾನದ ಮನೆ ತೆರೆಯಲಾಗಿದೆ. ಶುದ್ಧ ಕುಡಿಯುವ ಘಟಕವನ್ನು ದಾಸೋಹ ಭವನದ ಮುಂದೆ ತೆರೆಯಲಾಗಿದ್ದು, ಭಕ್ತರಿಗೆ ಉಚಿತವಾಗಿ ಶುದ್ಧ ನೀರು ಪೂರೈಕೆ ಮಾಡಲಿದ್ದಾರೆ. ಇನ್ನು ಆಯಕಟ್ಟಿನ ಪ್ರದೇಶದಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಪಾರ್ಕಿಂಗ್ ಆವರಣದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಶೌಚಗೃಹವನ್ನು ಬಳಕೆಗೆ ಬಿಡಲಾಗಿದೆ.
    ಸಿಸಿ ಕ್ಯಾಮರಾ ಕಣ್ಗಾವಲು


    ರಥೋತ್ಸವ ಸಂಪೂರ್ಣ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಸಾಗಲಿದೆ. ದೇವಾಲಯದಲ್ಲಿ ಈಗಾಗಲೇ ಶಾಶ್ವತ 16 ಸಿಸಿ ಕ್ಯಾಮರಾಗಳಿವೆ. ಕಪಿಲಾ ಸ್ನಾನಘಟ್ಟ, ರಥಬೀದಿ, ಭಕ್ತಿಮಾರ್ಗ ಸೇರಿದಂತೆ ಪ್ರಮುಖ ಕಡೆ 60ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. 10 ಕಡೆ ವಾಚರ್ ಟವರ್ ನಿರ್ಮಿಸಲಾಗಿದೆ. ಭದ್ರತೆಗಾಗಿ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

    ದೊಡ್ಡಜಾತ್ರಾ ಮಹೋತ್ಸವಕ್ಕಾಗಿ ಜಿಲ್ಲಾಡಳಿತ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಭಕ್ತರಿಗೆ ಮೂಲ ಸೌಲಭ್ಯ ಒದಗಿಸಲಾಗಿದೆ. ರಥಗಳು ಸಾಗುವ ವೇಳೆ ಅವಘಡ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಇರುವುದರಿಂದ ಈ ಬಾರಿ ನಿರೀಕ್ಷೆಗೂ ಮೀರಿ ಲಕ್ಷಾಂತರ ಭಕ್ತರು ಸೇರುವ ಸಾಧ್ಯತೆ ಇದೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ ಭದ್ರತೆಗೆ ಒತ್ತು ನೀಡಲಾಗಿದೆ.

    > ಎಂ.ಜಗದೀಶ್ ಕುಮಾರ್, ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts