ನ್ಯೂಸ್

'ಮಹಾ' ರೆಬೆಲ್​ಗಳ ವಿಷ್ಯವೇ ನಂಗೆ ಗೊತ್ತಿಲ್ಲ, ಲಕ್ಷ್ಮಿ ತಾನಾಗೇ ಬಂದ್ರೆ ಬೇಡ ಅನ್ನೋಕೆ ಆಗತ್ತಾ? ಎಂದ ಅಸ್ಸಾಂ ಸಿಎಂ

ಗುವಾಹಟಿ: ಮಹಾರಾಷ್ಟ್ರ ಸರ್ಕಾರವನ್ನು ಅಲ್ಲೋಲ ಕಲ್ಲೋಲ ಮಾಡಿರುವ ಶಿವಸೇನಾ ಪ್ರಭಾವಿ ನಾಯಕ ಏಕನಾಥ್​ ಶಿಂಧೆ ಅಸ್ಸಾಂನ ಗುವಾಹಟಿಯ ಹೋಟೆಲ್​ನಲ್ಲಿ ರೆಬೆಲ್​ ಶಾಸಕರೊಂದಿಗೆ ತಂಗಿದ್ದಾರೆ. ಅಸ್ಸಾಂ ರಾಜಧಾನಿ ಗುವಾಹಟಿಯ ಹೊರವಲಯದಲ್ಲಿರುವ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಎಲ್ಲರೂ ಮೊಕ್ಕಾಂ ಹೂಡಿದ್ದು, ಇಡೀ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಕ ಸೃಷ್ಟಿಸಿದೆ.

ಇಡೀ ಬೆಳವಣಿಗೆಯ ಹಿಂದೆ ಇರುವುದು ಬಿಜೆಪಿ ಎಂಬ ಚರ್ಚೆ ಎಲ್ಲೆಡೆ ಹರಿದಾಡುತ್ತಿದೆ. ಅಸ್ಸಾಂನಲ್ಲಿಯೂ ಬಿಜೆಪಿ ನೇತೃತ್ವದ ಸರ್ಕಾರವೇ ಇರುವ ಕಾರಣ, ಶಿಂಧೆ ಮತ್ತು ಅವರ ಬಣ ಅಲ್ಲಿಯೇ ಬೀಡುಬಿಟ್ಟಿರುವುದಾಗಿ ಸುದ್ದಿಯಾಗುತ್ತಿದೆ. ಶಾಸಕರಿಗೆ ಆಮಿಷ ಹಾಗೂ ಬೆದರಿಕೆ ಒಡ್ಡಿ ಸರ್ಕಾರ ಉರುಳಿಸುವ ಮೂಲಕ ತಾನು ಅಧಿಕಾರಕ್ಕೆ ಬರಲು ಬಿಜೆಪಿ ನಡೆಸಿರುವ ಸಂಚು ಎಂದು ಶಿವಸೇನಾ, ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಆರೋಪಿಸುತ್ತಿವೆ.

ಆದರೆ ಇದರ ನಡುವೆಯೇ, ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೀಡಿರುವ ಹೇಳಿಕೆ ಇದೀಗ ಭಾರಿ ಸುದ್ದಿಯಾಗಿದೆ. ಅದೇನೆಂದರೆ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂದಿರುವ ಸಿಎಂ, ಮಹಾರಾಷ್ಟ್ರದ ರೆಬೆಲ್​ ಶಾಸಕರು ಅಸ್ಸಾಂನಲ್ಲಿ ಬೀಡುಬಿಟ್ಟಿರುವ ವಿಷಯ ತಮಗೆ ಗೊತ್ತೇ ಇಲ್ಲ ಎಂದಿದ್ದಾರೆ!

"ಅಸ್ಸಾಂನಲ್ಲಿ ಹಲವಾರು ಸ್ಟಾರ್​ ಹೋಟೆಲ್‌ಗಳಿವೆ. ಯಾರು ಬೇಕಾದರೂ ಎಲ್ಲಿಯಾದರೂ ಉಳಿದುಕೊಳ್ಳಲು ಸ್ವಾತಂತ್ರ್ಯವಿದೆ. ಯಾರು ಬಂದು ಉಳಿದುಕೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಬೇರೆ ರಾಜ್ಯಗಳ ಶಾಸಕರು ಕೂಡ ಅಸ್ಸಾಂಗೆ ಬಂದು ಉಳಿದುಕೊಳ್ಳುತ್ತಾರೆ, ಅವೆಲ್ಲಾ ನನಗೆ ಹೇಗೆ ಗೊತ್ತಾಗುತ್ತದೆ? ಮಹಾರಾಷ್ಟ್ರದ ಶಾಸಕರು ಇರುವುದೂ ಗೊತ್ತಿಲ್ಲ" ಎಂದಿದ್ದಾರೆ.

ವಿನಾಶಕಾರಿ ಪ್ರವಾಹದಿಂದ ರಾಜ್ಯ ತತ್ತರಿಸಿರುವುದರಿಂದ ದೊಡ್ಡ ಪ್ರಮಾಣದ ಆದಾಯದ ಅವಶ್ಯಕತೆ ಇದೆ. ಗುವಾಹಟಿಯಲ್ಲಿ ಅನೇಕ ಐಷಾರಾಮಿ ಹೋಟೆಲ್‌ಗಳಿವೆ. ಕೊಠಡಿಗಳು ಭರ್ತಿಯಾದರೆ ಆವು ಖುಷಿಪಡಬೇಕು. ಏಕೆಂದರೆ ಅದರಿಂದ ವರಮಾನ ಬರುತ್ತದೆ. ನಾವು ಜಿಎಸ್‌ಟಿ ಮೂಲಕ ಸಂಪಾದನೆ ಮಾಡಬಹುದು. ಈ ಅವಧಿಯಲ್ಲಿ ನಮ್ಮ ಬಹುತೇಕ ಹೋಟೆಲ್‌ಗಳು ಖಾಲಿ ಇರುವಾಗ ಅಥವಾ ಕಡಿಮೆ ಜನರು ಬರುತ್ತಿರುವಾಗ ಲಕ್ಷ್ಮಿ ದೇವತೆಯನ್ನು ಏಕೆ ನಾವು ತಿರುಗಿ ಕಳುಹಿಸಬೇಕು? ಹೋಟೆಲ್​ಗಳಲ್ಲಿ ಜನರು ತಂಗುವ ಮೂಲಕ ಲಕ್ಷ್ಮಿ ಬಂದಾಗ ಬೇಡ ಅನ್ನೋಕೆ ಆಗುತ್ತಾ? ಹೀಗಾಗಿ ಎಲ್ಲರೂ ಅಸ್ಸಾಂಗೆ ಭೇಟಿ ನೀಡುವುದನ್ನು ಸ್ವಾಗತಿಸುತ್ತೇನೆ ಎಂದು ಅವರು ಹೇಳಿದ್ದಾರೆ.