ನ್ಯೂಸ್

ಹಸಿವಾದ್ದಕ್ಕೆ ₹10 ಸಾವಿರ ಹರಿದು ತಿಂದ ನಾಯಿ ಮರಿ!

suchetana

ಐಲ್ ಆಫ್ ಮ್ಯಾನ್‌ (ಬ್ರಿಟನ್‌): ನಾಯಿ ಮರಿಗಳು ಕೂಡ ಚಿಕ್ಕ ಮಕ್ಕಳು ಇದ್ದಂತೆ. ನಾಯಿಗಳು ಮನುಷ್ಯನ ಅಚ್ಚುಮೆಚ್ಚಿನ ಫ್ರೆಂಡ್ ಆದಂತೆಯೇ ಮರಿಗಳ ತುಂಟಾಟ ಕೂಡ ಚಿಕ್ಕಮಕ್ಕಳಂತೆಯೇ ಇರುತ್ತವೆ.

ಅದೇ ರೀತಿ ಮಕ್ಕಳು ತಿಳಿಯದೆಯೇ ಕೆಲವೊಮ್ಮ ಎಡವಟ್ಟು ಮಾಡಿಕೊಳ್ಳುತ್ತಾರೆ. ಅದೇ ರೀತಿ ನಾಯಿಮರಿಗಳು ಕೂಡ ಮಾಡುವುದುಂಟು.

ಇಂಥದ್ದೇ ಒಂದು ಎಡವಟ್ಟು ಬ್ರಿಟನ್‌ನ ನಾಯಿಮರಿಯೊಂದು ಮಾಡಿ ಇದೀಗ ಭಾರಿ ಸುದ್ದಿ ಮಾಡಿದೆ. ಅದೇನೆಂದರೆ ಹಸಿವು ಆಗಿದ್ದಕ್ಕೆ ತನ್ನ ಮಾಲೀಕರು ಕೂಡಿಟ್ಟಿದ್ದ 100 ಪೌಂಡ್‌ (9,800 ರೂ.ಗಳು) ದುಡ್ಡನ್ನು ಅಗಿದು ಜಗಿದು ತಿಂದು ಹಾಕಿಬಿಟ್ಟಿದೆ.

ಐಲ್ ಆಫ್ ಮ್ಯಾನ್‌ ಎಂಬ ಊರಿನ ಜೋಸೆಲಿನ್ ಹಾರ್ನೆ ಕೆಲ ದಿನಗಳಿಂದ ಕೂಡಿಟ್ಟ ಹಣವನ್ನು ತಮ್ಮ ಹಾಸಿಗೆ ಪಕ್ಕದ ಡಬ್ಬದಲ್ಲಿ ಇಟ್ಟಿದ್ದರು. ಆಕೆಯ ಸಾಕು ನಾಯಿ ಪೆಗ್ಗಿ ಅದರಲ್ಲಿ ಇಟ್ಟಿದ್ದ ನೋಟುಗಳನ್ನೆಲ್ಲಾ ಜಗಿದು ಹಾಕಿಬಿಟ್ಟಿದೆ.

ತಾವು ನಾಯಿಯನ್ನು ಬಿಟ್ಟು ಬೇರೆ ಕಡೆ ಹೋಗಿದ್ದೆವು. ಆಗ ಪೆಗ್ಗಿಗೆ ಹಸಿವು ಆಗಿದೆ. ಡಬ್ಬದಲ್ಲಿ ಏನೋ ಇರಬಹುದು ಎಂದು ಒಡೆದುಹಾಕಿದೆ. ಆಮೇಲೆ ಅದರಲ್ಲಿರುವ ನೋಟುಗಳನ್ನು ಹರಿದು ತಿನ್ನಲು ಪ್ರಯತ್ನಿಸಿದೆ. ಇದರಿಂದ ತಮ್ಮ ಸುಮಾರು 10 ಸಾವಿರ ರೂಪಾಯಿಗಳು ಚಿಂದಿಯಾಗಿ ಹೋಗಿವೆ. ನಾವು ಬರುವಷ್ಟರದಲ್ಲಿ ಪೆಗ್ಗಿ ಅದನ್ನು ಚಿಂದಿ ಮಾಡಿ ತಿನ್ನಲು ಪ್ರಯತ್ನಿಸುತ್ತಿತ್ತು ಎಂದು ಜೋಸೆಲಿನ್‌ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ನಾಯಿಯ ಜತೆ ಅದು ಹರಿದುಹಾಕಿರುವ ನೋಟುಗಳ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.