ಸಾಂದರ್ಭಿಕ ಚಿತ್ರ 
ನ್ಯೂಸ್

ದೋಣಿ ಮಧ್ಯೆ ನಿಂತು ವಿವಿಧ ಪೋಸ್​ ಕೊಟ್ಟು ಸೆಲ್ಫಿ ತೆಗೆದುಕೊಂಡ ಕುಟುಂಬ- ಕೊನೆಗೆ ನಡೆದದ್ದು ಭಾರಿ ದುರಂತ!

ಪುಣೆ (ಮಹಾರಾಷ್ಟ್ರ): ಸೆಲ್ಫಿಯ ಹುಚ್ಚಿಗೆ ಬಲಿಯಾದವರು ಲೆಕ್ಕಕ್ಕೇ ಇಲ್ಲ. ಬೆಟ್ಟದ ತುದಿಯಲ್ಲಿ, ನದಿಯ ನಡುವೆ, ಯಾವುದೇ ಎತ್ತರದ ಪ್ರದೇಶದಲ್ಲಿ... ಹೀಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ತೆತ್ತವರ ಬಗ್ಗೆ ದಿನನಿತ್ಯ ವರದಿಯಾಗುತ್ತಲೇ ಇದ್ದರೂ, ಕೆಲವರು ಮಾತ್ರ ತಮಗೇನೂ ಆಗುವುದಿಲ್ಲ ಎನ್ನುವಂತೆ ವರ್ತಿಸುವುದು ನಡೆದೇ ಇದೆ.

ಅಂಥದ್ದೇ ಒಂದು ಭಾರಿ ದುರಂತ ಸೋಲಾಪುರ ಜಿಲ್ಲೆಯ ವಂಗಿ ಪ್ರದೇಶದ ಉಜನಿ ಹಿನ್ನೀರಿನಲ್ಲಿ ನಡೆದಿದೆ. ದೋಣಿ ವಿಹಾರಕ್ಕೆ ಹೋದ ಕುಟುಂಬದವರು ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ದೊಡ್ಡ ಅನಾಹುತಕ್ಕೆ ಈಡಾಗಿದ್ದಾರೆ.

ಗಂಡ- ಹೆಂಡತಿ, ಅವರ ಇಬ್ಬರು ಮಕ್ಕಳು ಹಾಗೂ ಇಬ್ಬರು ಸ್ನೇಹಿತರು ಹಿನ್ನೀರಿನಲ್ಲಿ ವಿಹಾರಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ವಿವಿಧ ಪೋಸ್​ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾರೆ. ದೋಣಿಯ ತುದಿಯವರೆಗೂ ಹೋಗಿ ಸೆಲ್ಫಿ ತೆಗೆದುಕೊಳ್ಳಲು ಸುರು ಮಾಡಿದರು.

ಈ ವೇಳೆ ದೋಣಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಎಲ್ಲ ಆರು ಮಂದಿ ನೀರಿಗೆ ಬಿದ್ದಿದ್ದಾರೆ. ಕೂಡಲೇ ಮೀನುಗಾರರು ಅಲ್ಲಿಗೆ ಧಾವಿಸಿದ್ದಾರೆ. ಅವರು ಎಲ್ಲರನ್ನೂ ರಕ್ಷಣೆ ಮಾಡುವಷ್ಟರಲ್ಲಿಯೇ 49 ವರ್ಷದ ತಂದೆ ಮತ್ತು 13 ವರ್ಷದ ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಉಳಿದವರನ್ನು ರಕ್ಷಿಸಿ ದಡಕ್ಕೆ ತರಲಾಗಿದೆ. ಸದ್ಯ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಂದು ಸೋಲಾಪುರ ಎಸ್ಪಿ ತೇಜಸ್ವಿ ಸತ್ಪುತೆ ತಿಳಿಸಿದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ