ನ್ಯೂಸ್

ಜಾಮೀನಿನ ಮೇಲಿರೋ ರೇಪಿಸ್ಟ್​, ಕೊಲೆಗಾರ 'ದೇವಮಾನವ'ನಿಗೆ ಝಡ್​ ಪ್ಲಸ್​ ಭದ್ರತೆ!

ಚಂಡೀಗಢ: ಕೊಲೆ ಮತ್ತು ಅತ್ಯಾಚಾರ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್‌ಗೆ ಝಡ್​ ಪ್ಲಸ್​ ಭದ್ರತೆ ನೀಡಲಾಗಿದೆ. ಖಲಿಸ್ತಾನಿಗಳಿಂದ ಜೀವ ಬೆದರಿಕೆ ಇದೆ ಎಂದು ಈತ ಹೇಳಿದ್ದ ಹಿನ್ನೆಲೆಯಲ್ಲಿ ಈ ಭದ್ರತೆ ನೀಡಲಾಗಿದೆ.

ಪಂಜಾಬ್​ ಚುನಾವಣೆಯ ವೇಳೆ ಈತನಿಗೆ ಜಾಮೀನು ನೀಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಈಗ ಗಣ್ಯವ್ಯಕ್ತಿಗಳಿಗೆ ನೀಡಲಾಗುವ ಭದ್ರತೆ ನೀಡಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ರಾಮ್ ರಹೀಮ್​ ಪಂಜಾಬ್​ನ ಮಾಲ್ವಾ ಪ್ರದೇಶದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾನೆ. ಮಾಲ್ವಾ ಪ್ರದೇಶವು 69 ಕ್ಷೇತ್ರಗಳನ್ನು ಹೊಂದಿದ್ದು, ಪಂಜಾಬ್ ಅಸೆಂಬ್ಲಿಯ ಅರ್ಧದಷ್ಟು ಅಂದರೆ 117 ಸ್ಥಾನಗಳನ್ನು ಹೊಂದಿದೆ. ಇಲ್ಲಿ ಈತನ ಅನುಯಾಯಿಗಳು ಸಾಕಷ್ಟು ಮಂದಿ ಇದ್ದಾರೆ. ಇದರ ಬೆನ್ನಲ್ಲೇ ಈತನಿಗೆ ಪರೋಲ್​ ನೀಡಿ, ಪಂಜಾಬ್​ ಚುನಾವಣೆ ಮುಗಿಯುವವರೆಗೆ ಹೊರಗಡೆ ಇರುವಂತೆ ಮಾಡಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ. ಇದೀಗ ಭದ್ರತೆಯನ್ನು ನೀಡಿರುವುದಕ್ಕೆ ಹಲವಾರು ಸಂಶಯಗಳೂ ವ್ಯಕ್ತವಾಗತೊಡಗಿವೆ.

ರಾಮ್ ರಹೀಮ್‌ಗೆ ಖಲಿಸ್ತಾನಿ ಭಯೋತ್ಪಾದಕರಿಂದ ಜೀವ ಬೆದರಿಕೆ ಇದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದಿಂದ ಮಾಹಿತಿ ಬಂದಿದೆ ಎಂದು ಫೆಬ್ರವರಿ 6ರಂದು ಎಡಿಜಿ ಸಿಐಡಿ ರೋಹ್ಟಕ್ ರೇಂಜ್ ಕಮಿಷನರ್‌ಗೆ ಪತ್ರ ಬರೆದಿದ್ದರು. ಈತನಿಗೆ ಶಿಕ್ಷೆಯಾಗುವ ಮುನ್ನವೇ ಬೆದರಿಕೆಗಳು ಬರುತ್ತಿದ್ದವು ಎನ್ನಲಾಗುತ್ತಿದ್ದು, ಇದೀಗ ಭದ್ರತೆ ಒದಗಿಸಲಾಗಿದೆ.

ಡೇರಾ ಮುಖ್ಯಸ್ಥರು ಶಿಬಿರದೊಳಗೆ ಮಹಿಳಾ ಶಿಷ್ಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಕ್ಕೆ ಹಾಗೂ ಈ ಬಗ್ಗೆ ಮಾಹಿತಿ ನೀಡಿದ್ದ ಡೇರಾದ ಮ್ಯಾನೇಜರ್​ ರಂಜಿತ್ ಸಿಂಗ್ ಅವರ ಹತ್ಯೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಈತನಿಗೆ ಜೀವಾವಧಿ ಶಿಕ್ಷೆಯಾಗಿದೆ. ಇಷ್ಟೇ ಅಲ್ಲದೇ ಈತನ ಬಗ್ಗೆ ಬರೆದಿದ್ದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಕೂಡ ಈತ ಮಾಡಿದ್ದುದು ಸಾಬೀತಾಗಿದೆ. 2021ರ ಅಕ್ಟೋಬರ್​ನಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದಕ್ಕೂ ಮೊದಲು ಅಂದರೆ 2017ರ ಆಗಸ್ಟ್ 28 ರಂದು ಸಿಬಿಐ ನ್ಯಾಯಾಲಯವು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.