ನವದೆಹಲಿ: ಬಳಕೆದಾರರ ಖಾತ್ರೆಗೆ ಅಧಿಕೃತ ಮುದ್ರೆಯಾಗಿರುವ ಟ್ವಿಟರ್ನ ಬ್ಲೂಟಿಕ್ (ನೀಲಿಗೆರೆ) ವಿಷಯಕ್ಕೆ ಸಂಬಂಧಿಸಿದಂತೆ ಸಿಬಿಐ ಮಾಜಿ ನಿರ್ದೇಶಕ ಎಂ.ನಾಗೇಶ್ವರ ರಾವ್ ಅವರಿಗೆ ದೆಹಲಿ ಹೈಕೋರ್ಟ್ 10 ಸಾವಿರ ರೂಪಾಯಿ ದಂಡ ವಿಧಿಸಿದೆ.
ಕೆಲವು ಗಣ್ಯವ್ಯಕ್ತಿಗಳಿಗೆ ಮಾತ್ರ ನೀಡುವ ಈ ಬ್ಲೂಟಿಕ್ ತೆಗೆದುಹಾಕಿದ್ದರ ವಿರುದ್ಧ ನಾಗೇಶ್ವರ ರಾವ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ಕೂಡ ಅವರು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಸ್ ಹಾಕಿದ್ದರು. ಕಳೆದ ಏಪ್ರಿಲ್ 7ರಂದು ಆದೇಶ ಹೊರಡಿಸಿದ್ದ ಕೋರ್ಟ್, ಅರ್ಜಿಯನ್ನು ವಜಾ ಮಾಡಿತ್ತು. ಪುನಃ ಅದನ್ನು ಪ್ರಶ್ನಿಸಿ ಇದೀಗ ನಾಗೇಶ್ವರ ರಾವ್ ಕೋರ್ಟ್ ಮೊರೆ ಹೋಗಿದ್ದರು.
ಇದನ್ನು ನೋಡಿದ ನ್ಯಾಯಮೂರ್ತಿ ಯಶ್ವಂತ ವರ್ಮಾ ಅವರು ಕೋಪಗೊಂಡು, ಏಪ್ರಿಲ್ 7ರಂದೇ ಆದೇಶ ನೀಡಿದ್ದೇವಲ್ಲ, ಇನ್ನೇನಾದರೂ ಅಗತ್ಯವಿದ್ದರೆ ಕೂಡಲೇ ಅರ್ಜಿ ಸಲ್ಲಿಸಿ ಅದನ್ನು ಬಗೆಹರಿಸಿಕೊಳ್ಳಬೇಕಿತ್ತು, ಆಗ ನಿಮಗೆ ಏನು ಕಷ್ಟವಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ನಾಗೇಶ್ವರ ರಾವ್ ಅವರ ವಕೀಲರನ್ನು ಉದ್ದೇಶಿಸಿ, ನಿಮ್ಮ ಕಕ್ಷಿದಾರರಿಗೆ (ನಾಗೇಶ್ವರ ರಾವ್) ಸಾಕಷ್ಟು ವೇಳೆ ಇದ್ದಂತೆ ಕಾಣಿಸುತ್ತಿದೆ. ಅದಕ್ಕೇ ಇಷ್ಟು ವಿಳಂಬವಾಗಿ ಬಂದಿದ್ದೂ ಅಲ್ಲದೇ ಅದೇ ಪ್ರಶ್ನೆಯನ್ನಿಟ್ಟು ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಬಂದಾಗಲೆಲ್ಲಾ ನಮ್ಮಿಂದ ಉಡುಗೊರೆ ಬೇಕೇ ಎಂದು ಖಾರವಾಗಿ ಪ್ರಶ್ನಿಸಿದರು.
ಕೋರ್ಟ್ ಸಮಯವನ್ನು ವೃಥಾ ವ್ಯರ್ಥ ಮಾಡಿದ ಕಾರಣದಿಂದ 10 ಸಾವಿರ ರೂಪಾಯಿ ದಂಡ ವಿಧಿಸಿದರು. 1986ರ ಬ್ಯಾಚ್ ಐಪಿಎಸ್ ಅಧಿಕಾರಿಯಾದ ಎಂ.ನಾಗೇಶ್ವರರಾವ್ 2020ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.