ನ್ಯೂಸ್

ಪತ್ನಿಯ ಜತೆ ಮೊಬೈಲ್‌ನಲ್ಲಿ ಚಾಟ್‌ ಮಾಡ್ತಿದ್ದ ಸ್ನೇಹಿತನ ಕೊಲೆ ಮಾಡಿ ಸುಟ್ಟು ಭಸ್ಮ ಮಾಡಿದ ಪತಿ!

ಚಿಕ್ಕಬಳ್ಳಾಪುರ: ತನ್ನ ಪತ್ನಿಯ ಜೊತೆ ವಾಟ್ಸ್‌ಆ್ಯಪ್‌ನಲ್ಲಿ ಚಾಟಿಂಗ್ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಸ್ನೇಹಿತನನ್ನೇ ಕೊಂದು ಸುಟ್ಟು ಭಸ್ಮ ಮಾಡಿದ ಭಯಾನಕ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ತನ್ನ ಪತ್ನಿಯ ಜತೆಯೇ ಸ್ನೇಹಿತ ಅನೈತಿಕ ಸಂಬಂಧ ಹೊಂದಿದ್ದ ಎಂದು ಶಂಕಿಸಿರುವ ಅಶೋಕ ಎಂಬಾತ ತನ್ನ ಇತರ ಸ್ನೇಹಿತರ ಜತೆಗೂಡಿ ಈ ಕೃತ್ಯ ಎಸಗಿದ್ದಾನೆ.

ಮುತ್ತಕದಹಳ್ಳಿ ಗ್ರಾಮದ ಶಂಕರ್(28) ಮೃತ ವ್ಯಕ್ತಿಯಾಗಿದ್ದು ಈ ಘಟನೆ ಗೌರಿಬಿದನೂರು ತಾಲ್ಲೂಕಿನ ಕಂಬಾಲಪಲ್ಲಿ ಗ್ರಾಮದ ನೀಲಗಿರಿ ತೋಪಿನ ಬಳಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಹಲವು ತಿಂಗಳಿಂದ ಶಂಕರ್‌ ಅಶೋಕನ ಪತ್ನಿಯನ್ನು ಚುಡಾಯಿಸುತ್ತಿದ್ದ. ಪದೇಪದೆ ತಿಳಿ ಹೇಳಲಾಗಿದ್ದರೂ ತನ್ನ ಚಾಳಿ ಮುಂದುವರೆಸಿದ್ದ. ಇದರಿಂದ ಕೆರಳಿದ ಅಶೋಕ್ ಈ ಕೊಲೆ ಮಾಡಿದ್ದಾನೆ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸತ್ಯಾಂಶ ಇನ್ನಷ್ಟೇ ಹೊರಬರಬೇಕಿದೆ. (ದಿಗ್ವಿಜಯ ನ್ಯೂಸ್‌)