ನ್ಯೂಸ್

ಅಂತ್ಯಸಂಸ್ಕಾರದ 10ನೇ ದಿನಕ್ಕೆ ಅಪ್ಪನಿಗೆ ಕರೆ ಮಾಡಿದ ಕೊಲೆಯಾದ ಯುವತಿ!

suchetana

ಪಟ್ನಾ: ಜೀವನದಲ್ಲಿ ಒಮ್ಮೊಮ್ಮೆ ಏನೇನೋ ವಿಚಿತ್ರ ಘಟನೆಗಳು ನಡೆದುಹೋಗುತ್ತವೆ. ಅದರಲ್ಲಿಯೂ ಕರೊನಾ ವೈರಸ್‌ನ ಈ ದಿನಗಳಲ್ಲಿ ವೈರಸ್‌ನಿಂದ ಮೃತಪಟ್ಟವರ ಯಾರದ್ದೋ ಶವಕ್ಕೆ ಇನ್ನಾರೋ ಅಂತ್ಯಸಂಸ್ಕಾರ ಮಾಡಿರುವುದು, ಸತ್ತ ಸೋಂಕಿತ ಬದುಕಿದ್ದಾನೆ ಎಂದು ತಿಳಿಯುವುದು ಎಲ್ಲವೂ ಮಾಮೂಲು ಅನಿಸುವಷ್ಟು ನಡೆಯುತ್ತಿವೆ.

ಆದರೆ ಇಲ್ಲಿ ನಡೆದಿರುವ ಘಟನೆ ಕರೊನಾ ಸೋಂಕಿತರ ಕುರಿತು ಅಲ್ಲ. ಬದಲಿಗೆ ಅಪಹರಣವಾಗಿದ್ದ ಯುವತಿಯ ಕುರಿತು. ಶವವಾಗಿ ಪತ್ತೆಯಾಗಿದ್ದ ಯುವತಿಯೊಬ್ಬಳ ಅಂತ್ಯಸಂಸ್ಕಾರ ನಡೆಸಿದ್ದ ಕುಟುಂಬಸ್ಥರಿಗೆ ಅದೇ ಯುವತಿ ಸರಿಯಾದಿ 10ನೇ ದಿನ ಕರೆ ಮಾಡಿರುವ ಘಟನೆ ಇದು.

ಈ ವಿಚಿತ್ರ ಘಟನೆ ನಡೆದಿರುವುದು ಪಟ್ನಾದಲ್ಲಿ.

ಆಗಸ್ಟ್ 22ರಂದು ರಹೀಂಪುರದ ವ್ಯಕ್ತಿಯೊಬ್ಬರ ಮಗಳು ಮೇನಕಾ ನಾಪತ್ತೆಯಾಗಿದ್ದಳು. ಈ ಸಂಬಂಧ ಅವರು ದೂರು ದಾಖಲಿಸಿದ್ದರು. ಪೊಲೀಸರು ಸಹ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಮೇನಕಾ ತಂದೆ ಹೇಳಿದ ರೀತಿಯದ್ದೇ, ಅಷ್ಟೇ ವಯಸ್ಸಿನ ಯುವತಿಯೊಬ್ಬಳ ಶವ ಇದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅರ್ಧಬಂರ್ಧ ಸುಟ್ಟಿರುವ ಸ್ಥಿತಿಯಲ್ಲಿ ಶವವಿತ್ತು.

ಈ ಬಗ್ಗೆ ಮೇನಕಾ ಪಾಲಕಿರಗೆ ಶವ ತೋರಿಸಿದಾಗ ಅವರು ಇದು ತಮ್ಮ ಮಗಳ ಶವವೆಂದು ಗುರುತಿಸಿದರು. ಶವವನ್ನು ಮನೆಯವರಿಗೆ ಹಸ್ತಾಂತರಿಸಲಾಯಿತು. ಇದು ಕೊಲೆ ಪ್ರಕರಣವೆಂದು ದಾಖಲು ಮಾಡಿಕೊಂಡ ಪೊಲೀಸರು ಅದರ ತನಿಖೆ ಶುರು ಮಾಡಿದರು.

ಇತ್ತ ತಮ್ಮ ಮಗಳು ಸತ್ತ ನೋವಿನಲ್ಲಿಯೇ ಆಕೆಯ ಅಂತ್ಯಸಂಸ್ಕಾರವನ್ನು ಪಾಲಕರು ನೆರವೇರಿಸಿದರು.

ಇದಾಗಿ 10ನೇ ದಿನಕ್ಕೆ ತಂದೆಗೆ ಒಂದು ಕರೆ ಬಂತು. ಅವರು ರಿಸೀವ್‌ ಮಾಡಿದಾಗ, ‘ಅಪ್ಪಾ.. ನಾನು ನಿಮ್ಮ ಮಗಳ ಮೇನಕಾ’ ಎಂದು ಅತ್ತ ಕಡೆಯಿಂದ ದನಿ ಬಂತು. ಪಾಲಕರು ದಂಗಾಗಿ ಹೋದರು. ಒಂದು ಕ್ಷಣ ಏನು ಮಾಡುವುದು ಎಂದು ತೋಚಲಿಲ್ಲ. ಅದೇ ಹೊತ್ತಿನಲ್ಲಿ ಕರೆ ಕಟ್‌ ಆಯಿತು.

ನಂತರ ಮೇನಕಾ ಕುಟುಂಬಸ್ಥರಿಗೆ ವಿಡಿಯೋ ಸಂದೇಶ ರವಾನಿಸಿದ್ದಳು. ನಾನು ಸ್ವಇಚ್ಛೆ ಮೇರೆಗೆ ಮನೆ ಬಿಟ್ಟು ಬಂದಿದ್ದೇನೆ, ಕ್ಷಮಿಸಿ ಬಿಡಿ. ಪ್ರೀತಿಸುತ್ತಿದ್ದ ಹುಡುಗನನ್ನು ಮದುವೆಯಾಗಿ ಸುಖವಾಗಿದ್ದೇನೆ’ ಎಂದಳು. ತಾನು ಸತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ಆದರೆ ಸತ್ತಿದ್ದು ನಾನಲ್ಲ, ನಾನು ಹುಷಾರಾಗಿದ್ದೇನೆ ಎಂದು ಸಂದೇಶದಲ್ಲಿ ಹೇಳಿದಳು.

ಮಗಳ ಬದುಕಿದ್ದಾಳೆಂದು ಖುಷಿ ಪಡಬೇಕೋ, ಆಕೆ ಸತ್ತಿದ್ದಾಳೆಂದು ತಿಳಿದು ಅಂತ್ಯಸಂಸ್ಕಾರ ಮಾಡಿದ್ದಕ್ಕೆ ದುಃಖ ಪಡಬೇಕೋ, ಮಗಳು ತಮಗೆ ಹೇಳದೇ ಕೇಳದೇ ಮದುವೆಯಾದಳೆಂದು ಅಳಬೇಕೋ ಏನೂ ತೋಚದ ಪಾಲಕರು ದಂಗಾಗಿ ಕುಳಿತಿದ್ದಾರೆ.

ಇದು ಒಂದೆಡೆಯಾದರೆ, ಇವರು ಅಂತ್ಯಸಂಸ್ಕಾರ ಮಾಡಿರುವ ಯುವತಿ ಯಾರು ಎಂದು ಪೊಲೀಸರಿಗೆ ತಲೆಬಿಸಿ ಶುರುವಾಗಿದ್ದು, ತನಿಖೆ ಕೈಗೊಂಡಿದ್ದಾರೆ.