ಅಹಮದಾಬಾದ್: ಕರೊನಾ ಎರಡನೆಯ ಅಲೆ ತನ್ನ ರೌದ್ರಸ್ವರೂಪ ತೋರುತ್ತಿರುವ ನಡುವೆಯೇ ಇದೀಗ ಹೊಸದೊಂದು ಆತಂಕ ಶುರುವಾಗಿದೆ. ಸೋಂಕಿಗೆ ಒಳಗಾಗಿ ಚೇತರಿಸಿಕೊಂಡವರಲ್ಲಿ ಬ್ಲ್ಯಾಕ್ ಫಂಗಸ್ ಎನ್ನುವ ಹೊಸ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದು ಕಣ್ಣಿಗೆ ವಿಪರೀತ ಹಾನಿಯನ್ನುಂಟುಮಾಡುತ್ತಿದೆ. ಪ್ರತಿ 200 ಮಂದಿಯಲ್ಲಿ 8 ಮಂದಿ ಇದಲಾಗಲೇ ದೃಷ್ಟಿ ಕಳೆದುಕೊಂಡಿದ್ದಾರೆ.
ಸದ್ಯ ಗುಜರಾತ್‌ನಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಇಂತಹ ರೋಗಿಗಳಿಗೆ ಪ್ರತ್ಯೇಕವಾದ ವಾರ್ಡ್ ನಿರ್ಮಾಣ ಮಾಡಲಾಗಿದೆ. ಗುಜರಾತ್ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದು, ಔಷಧಕ್ಕಾಗಿ ಪ್ರತ್ಯೇಕ ಹಣ ಮೀಸಲು ಇರಿಸಲಾಗಿದೆ.
ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ 60 ಹಾಸಿಗೆಗಳ ಎರಡು ವಾರ್ಡ್‌ಗಳಣ್ನು ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಮೀಸಲಿಡಲಾಗಿದೆ. ಇಲ್ಲಿಯವರೆಗೆ 100 ಸೋಂಕಿತರನ್ನು ಪತ್ತೆ ಮಾಡಲಾಗಿದ್ದು, ಕೆಲವರು ದೃಷ್ಟಿಹೀನರಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಏನಿದು ಬ್ಲ್ಯಾಕ್ ಫಂಗಸ್?
ಇದು ಪರೂಪದ ಆದರೆ ಗಂಭೀರವಾದ ಶಿಲೀಂಧ್ರಗಳ ಸೋಂಕು, ಇದನ್ನು ಮ್ಯೂಕಾರ್ಮೈಕೋಸಿಸ್ ಎಂದು ಕರೆಯಲಾಗುತ್ತದೆ. ಆಡುಮಾತಿನಲ್ಲಿ “ಕಪ್ಪು ಶಿಲೀಂಧ್ರ” ಎನ್ನುತ್ತಾರೆ. ಇದು ಮೊದಲು ಚರ್ಮದಲ್ಲಿ ಕಾಣಿಸಿಕೊಂಡು ನಂತರ ಶ್ವಾಸಕೋಶ ಮತ್ತು ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಗುಜರಾತ್ ಮಾತ್ರವಲ್ಲದೇ ದೆಹಲಿ ಮತ್ತು ಮಹಾರಾಷ್ಟ್ರಗಳಲ್ಲಿಯೂ ಇದು ಪತ್ತೆಯಾಗಿದೆ.