ನ್ಯೂಸ್

ಕರೊನಾದಿಂದಾಗಿ ಹೋಂ ಐಸೋಲೇಷನ್‌ನಲ್ಲಿ ಇರುವಿರಾ? ಹಾಗಿದ್ದರೆ ಈ ಹೊಸ ಮಾರ್ಗಸೂಚಿಯನ್ನೊಮ್ಮೆ ಓದಿ...

ನವದೆಹಲಿ: ಕರೊನಾ ಪಾಸಿಟಿವ್‌ ಬಂದವರು ಹಾಗೂ ಲಕ್ಷಣಗಳು ಇದ್ದ ಸಂದರ್ಭಗಳಲ್ಲಿ ಕೆಲವೊಮ್ಮೆ ವೈದ್ಯರು ಮನೆಯಲ್ಲಿಯೇ ಉಳಿದುಕೊಳ್ಳುವಂತೆ (ಹೋಂ ಐಸೊಲೇಷನ್‌ಗೆ) ಶಿಫಾರಸು ಮಾಡುತ್ತಾರೆ. ಸೌಮ್ಯ ಹಾಗೂ ಯಾವುದೇ ಲಕ್ಷಣಗಳಲ್ಲಿ ಇಲ್ಲದಿದ್ದರೂ ಪಾಸಿಟಿವ್‌ ಹೊಂದಿರುವವರಿಗೆ ಹೆಚ್ಚಾಗಿ ಈ ಸೂಚನೆ ನೀಡಲಾಗುತ್ತಿದೆ.

ಅಂಥ ಸಂದರ್ಭಗಳಲ್ಲಿ ಮನೆಯಲ್ಲಿ ಇರುವವರು ಏನೆಲ್ಲಾ ಮುನ್ನೆಚ್ಚರಿಕಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಅದರಲ್ಲಿ ಇರುವ ಅಂಶಗಳು ಹೀಗಿವೆ:

* ಸೌಮ್ಯ ಲಕ್ಷಣ ಇಲ್ಲವೇ ಯಾವುದೇ ಲಕ್ಷಣ ಇಲ್ಲದಿರುವ ಬಗ್ಗೆ ದೃಢೀಕರಣ ಪಡೆಯಬೇಕು.

* ಮನೆಯಲ್ಲಿ ಬೇರೆಯವರಿಗೆ ಸೋಂಕು ಹರಡದಂತೆ ಪ್ರತ್ಯೇಕ ಕೋಣೆ ಸೇರಿದಂತೆ ಅಗತ್ಯ ಸೌಲಭ್ಯ ಏರ್ಪಾಡು ಮಾಡಿಕೊಳ್ಳಬೇಕು.

*60 ವರ್ಷ ಮೇಲ್ಪಟ್ಟವರು, ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ, ಲಿವರ್​, ಕಿಡ್ನಿ ಸಮಸ್ಯೆ ಹೊಂದಿರುವವರು ಸರಿಯಾಗಿ ವೈದ್ಯಾಧಿಕಾರಿಯ ನಿಗಾದಲ್ಲಿರಬೇಕು.

* 24 ಗಂಟೆಯೂ ಸೋಂಕಿತನ ಕಾಳಜಿ ಮಾಡಲು ಯಾರಾದರೂ ಇರಬೇಕು. ಆ ವೇಳೆ ಎಲ್ಲಾ ನಿಮಗಳ ಪಾಲನೆ ಮಾಡಬೇಕು.

*ಎಚ್​ಐವಿ ಹಾಗೂ ಕ್ಯಾನ್ಸರ್​ ಚಿಕಿತ್ಸೆಗೆ ಒಳಗಾಗಿರುವ ಸೋಂಕಿತರಿಗೆ ಹೋಮ್​ ಐಸೋಲೇಷನ್​ನಲ್ಲಿ ಇರಲು ಅವಕಾಶವಿಲ್ಲ. ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಗಲಿದೆ ಎಂದು ದೃಢವಿದ್ದರೆ ಮಾತ್ರ ಐಸೋಲೇಷನ್​ ಆಯ್ಕೆ ನೀಡಬಹುದು.

* ವೈದ್ಯರ ಸೂಚನೆಯಂತೆ ಸೋಂಕಿತರ ಕಾಳಜಿ ವಹಿಸುವವರು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿ ಇರುವವರು ಹೈಡ್ರೋಕ್ಸಿಕ್ಲೋರೋಕ್ವಿನ್​​ ಪ್ರೊಪೈಲ್ಯಾಕ್ಸಿಸ್​ ಸೇವಿಸಬೇಕು.

* ಸೋಂಕಿತ ವ್ಯಕ್ತಿ ಮನೆಯವರಿಂದ ಪ್ರತ್ಯೇಕವಾಗಿ ಇರಬೇಕು. ಮನೆಯಲ್ಲಿ ವಯಸ್ಸಾದವರು ಅಥವಾ ರಕ್ತದೊತ್ತಡ ಸೇರಿದಂತೆ ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರ ಸಮೀಪ ಹೋಗಬಾರದು.

* ಗಾಳಿಯಾಡುವಂತಹ ಕೋಣೆಯಲ್ಲಿಯೇ ಸೋಂಕಿತರನ್ನು ಇಡಬೇಕು.

*ಸೋಂಕಿತರು ತಮ್ಮ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳುವಂತಿಲ್ಲ.

* ಸೋಂಕಿತರು ಮೂರು ಲೇಯರ್​ ಮೆಡಿಕಲ್​ ಮಾಸ್ಕ್​ಗಳನ್ನೇ ಧರಿಸಬೇಕು. ಎಂಟು ಗಂಟೆಗಳಿಗೊಮ್ಮೆ ಮಾಸ್ಕ್ ಬದಲಾಯಿಸಬೇಕು. ಸೋಂಕಿತರ ಕಾಳಜಿ ತೆಗೆದುಕೊಳ್ಳುವವರು ಕೋಣೆಗೆ ಬರುವ ಮುನ್ನ ಎನ್​ 95 ಮಾಸ್ಕ್​​​ ಧರಿಸಬೇಕು.

* 1 ಪರ್ಸೆಂಟ್​ ಸೋಡಿಯಂ ಹೈಪೋಕ್ಲೋರೈಟ್​ನಿಂದ ಮಾಸ್ಕ್​ಗಳನ್ನ ಸೋಂಕು ರಹಿತ ಮಾಡಿ ಬಳಿಕ ಅದನ್ನು ನಾಶ ಮಾಡಬೇಕು.

*ಸೋಂಕಿತರ ದ್ರವಾಹಾರಗಳಣ್ನು ಹೆಚ್ಚಾಗಿ ಸೇವಿಸಬೇಕು.

* ಸೋಂಕಿತ ವ್ಯಕ್ತಿ ಪ್ರತಿ ದಿನ ದೇಹದ ತಾಪಮಾನವನ್ನ ಪರೀಕ್ಷೆ ಮಾಡಿಕೊಳ್ಳಬೇಕು.

* ಎಲ್ಲಾ ಸಮಯದಲ್ಲೂ ಉಸಿರಾಟದ ಶಿಷ್ಟಾಚಾರಗಳನ್ನ ಪಾಲಿಸಬೇಕು.

* ಆಕ್ಸಿಮೀಟರ್​ನ ಸಹಾಯದಿಂದ ಆಗಾಗ ಆಮ್ಲಜನಕ ಮಟ್ಟವನ್ನು ಪರೀಕ್ಷೆ ಮಾಡುತ್ತಿರಬೇಕು.

* 40 ಸೆಕೆಂಡ್​ಗಳ ಕಾಲ ಸೋಪು ಇಲ್ಲವೇ ಆಲ್ಕೋಹಾಲ್​ ಇರುವ ಸ್ಯಾನಿಟೈಸರ್​ಗಳಿಂದ ಕೈ ತೊಳೆದುಕೊಳ್ಳಬೇಕು.

* 1 ಪರ್ಸೆಂಟ್​ ಹೈಪೋಕ್ಲೋರೈಟ್​ ಸೊಲ್ಯೂಷನ್​ನಿಂದ ಕೋಣೆಯ ಪ್ರತಿಯೊಂದು ಮೂಲೆಯನ್ನ ಸ್ವಚ್ಛ ಮಾಡಬೇಕು.

ಹೀಗಾದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ:

1. ಉಸಿರಾಟದ ತೊಂದರೆ.

2. ಆಮ್ಲಜನಕ ಮಟ್ಟ ಇಳಿಕೆಯಾಗುವುದು.

3. ಎದೆಯಲ್ಲಿ ನೋವು ಕಾಣಿಸಿಕೊಂಡಾಗ.

4. ಮಾನಸಿಕವಾಗಿ ಆರೋಗ್ಯ ಹದಗೆಡುತ್ತಿದೆ ಎನಿಸಿದಾಗ.