ನ್ಯೂಸ್

ಸಹೋದರರ ಗಲಾಟೆ ಬಗೆಹರಿಸಲು ಹೋಗಿ ಹೆಣವಾದ ಸಬ್‌ ಇನ್ಸ್‌ಪೆಕ್ಟರ್‌! ಗುಂಡುಹೊಡೆದು ಸಾಯಿಸಿದ ಅಣ್ಣ

ನೆಹರಾ (ಉತ್ತರ ಪ್ರದೇಶ): ಆಲೂಗಡ್ಡೆ ಕೊಯ್ಲು ಮಾಡುವ ಕುರಿತಾಗಿ ಅಣ್ಣತಮ್ಮಂದಿರ ನಡುವೆ ಜಗಳವಾಗುತ್ತಿದ್ದ ಸಂದರ್ಭದಲ್ಲಿ ಸಮಸ್ಯೆಯನ್ನು ಬಗೆಹರಿಸಲು ಹೋದ ಸಬ್‌ ಇನ್ಸ್‌ಪೆಕ್ಟರ್‌ ಮೇಲೆಯೇ ಅಣ್ಣ ಗುಂಡು ಹೊಡೆದು ಸಾಯಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ನೆಹರಾದಲ್ಲಿ ನಡೆದಿದೆ.

ಸಬ್ ಇನ್ಸ್ ಪೆಕ್ಟರ್ ಪ್ರಶಾಂತ್ ಯಾದವ್ (35) ಗುಂಡೇಟಿಗೆ ಬಲಿಯಾಗಿದ್ದಾರೆ. ಆಲೂಗಡ್ಡೆ ಕೊಯ್ಲು ಮಾಡುವ ವಿಷಯಕ್ಕೆ ಸಂಬಂಧಪಟ್ಟಂತೆ ಅಣ್ಣ ತಮ್ಮನಿಗೆ ಬೆದರಿಕೆ ಹಾಕಿದ್ದಾನೆ. ಈ ಕುರಿತಂತೆ ತಮ್ಮ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ. ಆಗ ಸಮಸ್ಯೆ ಬಗೆಹರಿಸಲು ಪ್ರಶಾಂತ್ ಯಾದವ್ ಮತ್ತು ಕಾನ್ಸ್ ಟೇಬಲ್ ಸ್ಥಳಕ್ಕೆ ತೆರಳಿದ್ದಾರೆ.

ಈ ವೇಳೆ ಅಣ್ಣ ಗುಂಡಿಟ್ಟು ಯಾದವ್‌ ಅವರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಹೋದರರಾದ ವಿಶ್ವನಾಥ್ ಮತ್ತು ಶಿವನಾಥ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಪೈಕಿ ವಿಶ್ವನಾಥ್‌ ವಿರುದ್ಧ ಶಿವನಾಥ್ ಪೊಲೀಸರಿಗೆ ದೂರು ನೀಡಿದ್ದ. ಸ್ಥಳಕ್ಕೆ ಸಬ್‌ ಇನ್ಸ್‌ಪೆಕ್ಟರ್‌ ಹೋದಾಗ ಪೊಲೀಸರು ಬರುವ ವಿಷಯ ತಿಳಿಯುತ್ತಿದ್ದಂತೆಯೇ ವಿಶ್ವನಾಥ್ ತನ್ನ ಸಹಚರರೊಂದಿಗೆ ಪರಾರಿಯಾಗಿದ್ದಾನೆ. ಆತನನ್ನು ಹಿಡಿಯುವ ಉದ್ದೇಶದಿಂದ ಪೊಲೀಸರು ಬೆನ್ನಟ್ಟಿ ಹೋಗಿದ್ದಾರೆ. ಈ ವೇಳೆ ಆತ ಗುಂಡು ಹಾರಿಸಿದ್ದಾನೆ.

ಈ ಗುಂಡು ಯಾದವ್‌ ಅವರ ಕುತ್ತಿಗೆಗೆ ತಗುಲಿ ಕುಸಿದುಬಿದ್ದರು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಶಾಂತ್ ಯಾದವ್ ಬುಲಂದಶಹರ್ ಜಿಲ್ಲೆಯವರಾಗಿದ್ದು 2015ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ, ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಜತೆಗೆ ಅವರ ಹಳ್ಳಿಗೆ ಪ್ರಶಾಂತ್ ಯಾದವ್ ಹೆಸರು ಇಡುವುದಾಗಿ ಘೋಷಿಸಲಾಗಿದೆ.