ಹೈದರಾಬಾದ್: ಈಗ ಎಲ್ಲೆಲ್ಲೂ ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿಗಳ ಮನೆಯ ಮೇಲೆ ದಾಳಿಯದ್ದೇ ಸುದ್ದಿ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರ ಗುಂಪೊಂದು ಶ್ರೀಮಂತ ವ್ಯಕ್ತಿಯೊಬ್ಬರ ಮನೆಗೆ ಬಂದು ಲೂಟಿ ಮಾಡಿದ್ದಾರೆ.
ಈ ಘಟನೆ ನಡೆದಿರುವುದು ಹೈದರಾಬಾದ್‌ನಲ್ಲಿ. ಇಲ್ಲಿಯ ರಿಯಲ್ ಎಸ್ಟೇಟ್ ಉದ್ಯಮಿಯ ಮನೆಗೆ ಬಂದ ದರೋಡೆಕೋರರು ತಮ್ಮನ್ನು ನಾವು ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ಅವರ ಪತ್ನಿ ಒಬ್ಬರೇ ಮನೆಯಲ್ಲಿ ಇರುವುದನ್ನು ನೋಡಿದ ಕಳ್ಳರು ಈ ಕೆಲಸ ಮಾಡಿದ್ದಾರೆ. ತಾವು ಯಾವುದೇ ಅಕ್ರಮ ಎಸಗಿಲ್ಲ, ಮನೆಗೆ ಬಂದಿದ್ದೇಕೆ ಎಂದೆಲ್ಲಾ ಉದ್ಯಮಿ ಪತ್ನಿ ಹೇಳಿದರೂ, ತಮ್ಮ ಕರ್ತವ್ಯ ತಾವು ಮಾಡಲೇಬೇಕಿದೆ ಎಂದಿದ್ದಾರೆ ಈ ಖದೀಮರು.
ನಂತರ ಮನೆಯಲ್ಲಿದ್ದ ಬೀರು ಸೇರಿದಂತೆ ಎಲ್ಲೆಡೆ ಜಾಲಾಡಿದ್ದಾರೆ. ಕೊನೆಗೆ , ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿಕೊಂಡು ಹೋಗಿದ್ದಾರೆ. ಈ ವೇಳೆಗಾಗಲೇ ಪತಿಗೆ ಕರೆ ಮಾಡಿ ಅವರ ಪತ್ನಿ ವಿಷಯ ತಿಳಿಸಿದ್ದಾರೆ. ಅವರು ಬರುವಷ್ಟರಲ್ಲಿಯೇ ಮನೆಯಲ್ಲಿದ್ದ 3.5 ಕೆ.ಜಿ ಚಿನ್ನ ಹಾಗೂ 2 ಲಕ್ಷ ದೋಚಿ ಅವರು ಪರಾರಿಯಾಗಿದ್ದರು. ಇದೀಗ ಉದ್ಯಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.