ನವದೆಹಲಿ: ಉತ್ತರ ಪ್ರದೇಶ, ಉತ್ತರಾಖಂಡಾ, ಗೋವಾ, ಪಂಜಾಬ್ ಹಾಗೂ ಮಣಿಪುರ ಪಂಚರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಕಾಂಗ್ರೆಸ್ ಈಗ ಹೈರಾಣಾಗಿ ಹೋಗಿದೆ. ಖುದ್ದು ಕಾಂಗ್ರೆಸ್ಸಿನಲ್ಲಿಯೇ ನಾಯಕತ್ವದ ಕುರಿತು ಅಸಮಾಧಾನದ ಹೊಗೆ ಆಡಲು ಶುರುವಾಗಿದೆ. ಇದರಿಂದ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಲು ಇಂದು ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆಯನ್ನು ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಕರೆದಿದ್ದಾರೆ.
ಬೇರೆಡೆ ಇಲ್ಲದಿದ್ದರೂ ಉತ್ತರಖಂಡಾದಲ್ಲಿ ಗೆಲ್ಲಬಹುದು ಎಂದು ಕಾಂಗ್ರೆಸ್ ಅಂದುಕೊಂಡಿತ್ತು . ಗೋವಾದಲ್ಲಿ ಸರ್ಕಾರ ರಚನೆಗೆ ಬೇಕಾದ 21 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದಿದ್ದರೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ವಿಶ್ವಾಸ ಹೊಂದಿತ್ತು. ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ಖುದ್ದು ಪ್ರಿಯಾಂಕಾ ಗಾಂಧಿ ಅವರೇ ಉಸ್ತುವಾರಿ ವಹಿಸಿಕೊಂಡು ನಿರಂತರವಾಗಿ ಪ್ರಚಾರ ಮಾಡಿದ ಕಾರಣಕ್ಕೆ ಈ ಬಾರಿ ಹೆಚ್ಚಿನ ಸೀಟುಗಳನ್ನು ಗಳಿಸಬಹುದು. ಕಡೆಪಕ್ಷ ಮತಗಳಿಕೆಯ ಪ್ರಮಾಣವಾದರೂ ಹೆಚ್ಚಾಗಬಹುದು ಎಂದುಕೊಂಡಿತ್ತು. ಆದರೆ ಎಲ್ಲವೂ ಹುಸಿಯಾಗಿದೆ.
ಇದರ ನಡುವೆಯೇ ಸೋಲಿನ ಹೊಣೆ ಹೊತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೇ ಈ ಸುದ್ದಿ ಭಾರಿ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್‌ಗಳು ಬರುತ್ತಿವೆ.
ಹಲವರು ಈ ಸುದ್ದಿಗೆ ಸ್ವಾಗತ ವ್ಯಕ್ತಪಡಿಸಿದ್ದಾರೆ. ಈ ರಾಜೀನಾಮೆಯಿಂದ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆ ಆಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದರೆ, ಪ್ರಿಯಾಂಕಾ ಅಭಿಮಾನಿಗಳು ತುಂಬಾ ನಿರಾಶರಾಗಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು 'ಸೋಲಿನ ಹಿನ್ನೆಲೆಯಲ್ಲಿ ಶೀಘ್ರವೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಸಭೆ ಕರೆಯಲಿದ್ದಾರೆ. ಸಭೆಯಲ್ಲಿ ಸೋಲಿಗೆ ಕಾರಣಗಳನ್ನು ಹುಡುಕಲಾಗುವುದು ಎಂದು ಹೇಳಿದ್ದರು. ಆದರೆ ಇದೀಗ ರಾಜೀನಾಮೆಯ ಸುದ್ದಿಯನ್ನು ಕಾಂಗ್ರೆಸ್ ಅಲ್ಲಗಳೆದಿದೆ.
ಪ್ರಿಯಾಂಕಾ ಗಾಂಧಿಯಾಗಲೀ, ರಾಹುಲ್ ಗಾಂಧಿ, ಮತ್ತು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜೀನಾಮೆ ನೀಡುತ್ತಾರೆಂಬ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ. ಉನ್ನತ ನಾಯಕರು ರಾಜೀನಾಮೆ ನೀಡುವ ಬಗ್ಗೆ ಊಹಾಪೋಹಗಳು ಹಬ್ಬಿದ್ದು, ಇವೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಈಗ ಹರಿದಾಡುತ್ತಿರುವ ರಾಜೀನಾಮೆ ಸುದ್ದಿ ಕೇವಲ ಊಹಾಪೋಹವಾಗಿದ್ದು, ಅವುಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ. ಅದೇನೆ ಇದ್ದರೂ ಇವತ್ತು ನಡೆಯಲಿರುವ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ.