ನ್ಯೂಸ್

ಹಾಸ್ಯಲೋಕಕ್ಕೆ ಮತ್ತೊಂದು ಬರಸಿಡಿಲು: ರಾಜು ಶ್ರೀವಾಸ್ತವ್​ ಸಾವಿನ ಬೆನ್ನಲ್ಲೇ ಕಾಮಿಡಿಯನ್ ಪರಾಗ್ ನಿಧನ!

ಮುಂಬೈ: ಕೆಲ ದಿನಗಳ ಹಿಂದಷ್ಟೇ ಹಾಸ್ಯನಟ ರಾಜು ಶ್ರೀವಾಸ್ತವ್​ ನಿಧನರಾಗಿದ್ದರು. ವರ್ಕ್​ಔಟ್​ ಮಾಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ರಾಜು ಮೃತಪಟ್ಟಿದ್ದು, ಹಾಸ್ಯಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿತ್ತು. ಈಗ ಇವರದ್ದೇ ಹಾದಿ ಹಿಡಿದಿದ್ದಾರೆ, ಮತ್ತೋರ್ವ ಹಾಸ್ಯ ನಟ 51 ವರ್ಷದ ಪರಾಗ್ ಕನ್ಸಾರಾ.

ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಷೋ ಮೂಲಕ ಜನರನ್ನು ನಕ್ಕು ನಗಿಸುತ್ತಿದ್ದ ಸ್ಯ್ಟಾಂಡ್ ಅಪ್ ಕಾಮಿಡಿಯನ್ ಪರಾಗ್ ಮೃತಪಟ್ಟಿದ್ದಾರೆ.

ಈ ಕುರಿತು ಅವರ ಆಪ್ತ ಗೆಳೆಯ ಸುನೀಲ್ ಪಾಲ್ ಖಚಿತಪಡಿಸಿದ್ದಾರೆ. 'ಹಾಸ್ಯ ಮನರಂಜನೆಯ ವಲಯದಿಂದ ಮತ್ತೊಂದು ಆಘಾತಕಾರಿ ಹಾಗೂ ದುಃಖದ ಸುದ್ದಿ ಬಂದಿದೆ. ಲಾಫ್ಟರ್​ ಚಾಲೆಂಜ್​ನ ಕೋ-ಕಂಟೆಸ್ಟಂಟ್ ಕನ್ಸಾರಾ ಜಿ ವಿಧಿವಶರಾಗಿದ್ದಾರೆ. ರಿವರ್ಸ್​ ಥಿಂಕಿಂಗ್ ಕಾಮಿಡಿಯ ಮೂಲಕ ನಮ್ಮನ್ನೆಲ್ಲ ನಗಿಸಿ ನಲಿಸುತ್ತಿದ್ದ ಪರಾಗ್ ಇನ್ನಿಲ್ಲ. ಇಡೀ ಜಗತ್ತನ್ನೇ ನಗಿಸುವವರ ಕುಟುಂಬಕ್ಕೆ ಏಕಿಂಥ ಸ್ಥಿತಿ ಬರುತ್ತದೆ ಎಂದು ತಿಳಿಯುವುದಿಲ್ಲ. ಕಾಮಿಡಿಯ ಗಟ್ಟಿ ಸ್ತಂಭಗಳು ಒಂದೊಂದಾಗಿ ನಮ್ಮನ್ನು ಬಿಟ್ಟು ಹೋಗುತ್ತಿವೆ' ಎಂದು ಸುನೀಲ್​ ನೋವು ತೋಡಿಕೊಂಡಿದ್ದಾರೆ.

ರಾಜು ಶ್ರೀವಾಸ್ತವ್​, ದೀಪೇಶ್ ಭಾನ್, ಅಶೋಕ್ ಸುಂದ್ರಾನಿ ಮತ್ತು ಅನಂತ್ ಶ್ರೀಮಣಿ ಸೇರಿದಂತೆ ಇತ್ತೀಚೆಗೆ ಅಗಲಿದ ಇತರ ಹಾಸ್ಯನಟರನ್ನು ಕೂಡ ಸುನೀಲ್ ನೆನಪಿಸಿಕೊಂಡಿದ್ದಾರೆ. (ಏಜೆನ್ಸೀಸ್​)