ನ್ಯೂಸ್

ಬಾಲಕಿ ಮೇಲೆ ಗ್ಯಾಂಗ್​ರೇಪ್​, ಕೊಲೆ- ಕಾಮುಕರಿಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್​

ಗಾಜಿಯಾಬಾದ್​ (ಉತ್ತರಪ್ರದೇಶ) : ಗಾಜಿಯಾಬಾದ್​ನ ಹಾಪುರದಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿದ್ದ ಇಬ್ಬರು ಕಾಮುಕರಿಗೆ ಹಾಪುರ ಸೆಷನ್ಸ್​ ಕೋರ್ಟ್​ ಮರಣದಂಡನೆ ವಿಧಿಸಿದೆ.

ವಿಶೇಷ ನ್ಯಾಯಾಧೀಶೆ ವೀಣಾ ನಾರಾಯಣ್ ಈ ತೀರ್ಪು ನೀಡಿದ್ದಾರೆ. 2018ರಲ್ಲಿ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ ಎರಡು ವರ್ಷಗಳಲ್ಲಿಯೇ ತೀರ್ಪು ಹೊರಬಂದಿದೆ.

ಅಂಕುರ್ ತೆಲಿ ಮತ್ತು ಸೋನು ಎಂಬ ಕಾಮುಕರು ಇದೀಗ ಗಲ್ಲುಶಿಕ್ಷೆಗೆ ಒಳಗಾಗಿದ್ದಾರೆ.

ಈ ಇಬ್ಬರು ಅಪರಾಧಿಗಳು ಬಾಲಕಿಯ ಮನೆಯಲ್ಲಿ ಕೆಲಸಕ್ಕೆ ಇದ್ದರು. 2018ರ ಸೆಪ್ಟೆಂಬರ್ 9ರಂದು ಬಾಲಕಿಯ ಪಾಲಕರು ಕೆಲಸಕ್ಕೆ ಹೋಗಿದ್ದಾಗ ಆಕೆ ಮತ್ತು 10 ವರ್ಷದ ತಮ್ಮ ಮಾತ್ರ ಮನೆಯಲ್ಲಿದ್ದರು. ಈ ಇಬ್ಬರು ಕಾಮುಕರು ಇದೇ ಸಮಯ ನೋಡಿಕೊಂಡು ಅತ್ಯಾಚಾರ ಮಾಡಿದ್ದಾರೆ.

ತನ್ನ ಅಕ್ಕನ ಮೇಲೆ ಆಗುತ್ತಿರುವ ಹಲ್ಲೆಯನ್ನು ನೋಡಿದ ಬಾಲಕ ಕೂಗಿಕೊಂಡಿದ್ದ. ಈತ ತಮ್ಮ ವಿರುದ್ಧ ದೂರು ಹೇಳುತ್ತಾನೆ ಎಂದುಕೊಂಡ ನೀಚರು ಆತನ ಕತ್ತು ಸೀಳಿದ್ದರು. ರಕ್ತದ ಮಡುವಿನಲ್ಲಿ ಆತ ಬಿದ್ದಿದ್ದ. ಅವನು ಸತ್ತುಹೋದ ಎಂದು ಭಾವಿಸಿದ ಈ ಇಬ್ಬರು, ಬಾಲಕಿ ತಮ್ಮನ್ನು ಗುರುತಿಸುತ್ತಾಳೆ ಎಂಬ ಕಾರಣಕ್ಕೆ ಅವಳನ್ನೂ ಕೊಂದು ಹುಲ್ಲಿನ ಗೋದಾಮಿನಲ್ಲಿ ಶವ ಎಸೆದಿದ್ದರು.

ಪಾಲಕರು ಮನೆಗೆ ಬಂದಾಗ ಬಾಲಕನ ಸ್ಥಿತಿ ನೋಡಿ ಕೂಡಲೇ ಆಸ್ಪತ್ರೆಗೆ ಸೇರಿಸಿದರು. ಕುತ್ತಿಗೆಗೆ ಆಗಿರುವ ಗಂಭೀರ ಗಾಯದಿಂದಾಗಿ ಆತ ಮಾತನಾಡಲು ಸಾಧ್ಯವಾಗಿರಲಿಲ್ಲ. ನಂತರ ಆತ ಗುಣಮುಖನಾದ ನಂತರ, ವಿಷಯವನ್ನು ತಿಳಿಸಿದ್ದಾನೆ.

ಬಾಲಕನೇ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ. ಆತನ ಹೇಳಿಕೆ ಪಡೆದು ಕಾಮುಕರನ್ನು ಬಂಧಿಸಿದ್ದಾಗ ತಪ್ಪು ಒಪ್ಪಿಕೊಂಡಿದ್ದರು.