ನ್ಯೂಸ್

ಡಿವೋರ್ಸ್‌ ಆದ್ರೆ ಮಗುವಿನ ಕಸ್ಟಡಿಯನ್ನು ತಾಯಿಯ ಬದಲು ತಂದೆ ಪಡೆದುಕೊಳ್ಳಲು ಸಾಧ್ಯವೆ? ಉತ್ತರ ಇಲ್ಲಿದೆ..

ಮೇಡಂ, ನಮ್ಮದು ವಿಚ್ಛೇದನ ಆಗುವ ಹಂತದಲ್ಲಿದೆ. ನಮಗೊಂದು ಮಗುವಿದ್ದು, ಅದರ ಕಸ್ಟಡಿಯನ್ನು ಅಪ್ಪನಾದ ನಾನು ಬಯಸುತ್ತಿದ್ದೇನೆ. ಆದರೆ ಕೋರ್ಟ್‌ಗಳು ಮಕ್ಕಳನ್ನು ತಾಯಿಗೆ ಕೊಡುತ್ತವಂತೆ. ಇದು ನಿಜವೆ? ಇದಕ್ಕೆ ಸಂಬಂಧಿಸಿದ ಕಾನೂನು ಏನಿವೆ?

ಉತ್ತರ: ಸಾಮಾನ್ಯವಾಗಿ ಐದು ವರ್ಷ ವಯಸ್ಸಿನ ಒಳಗಿರುವ ಮಗುವಿನ ಕಸ್ಟಡಿಯನ್ನು ತಾಯಿಗೇ ಕೊಡಲಾಗುತ್ತದೆ. ತಾಯಿಯ ಹತ್ತಿರ ಮಗುವಿನ ಕಸ್ಟಡಿ ಮುಂದುವರೆಯುವುದು ಹಾನಿಕಾರಕ ಎನ್ನುವುದನ್ನು ಸಾಬೀತು ಪಡಿಸಿದಾಗ ಮಾತ್ರ, ಕಸ್ಟಡಿಯನ್ನು ತಂದೆಗೆ ಕೊಡುವಂತೆ ಆದೇಶ ಮಾಡಬಹುದು.

ಆದರೆ ಮಗು ಹಲವು ವರ್ಷಗಳಿಂದ ತಾಯಿಯಿಂದ ದೂರವಾಗಿದ್ದು ತಂದೆಯ ಹತ್ತಿರವೇ ಇದ್ದಂತಹ ಸಂದರ್ಭದಲ್ಲಿ, ತಂದೆಯ ಹತ್ತಿರವೇ ಕಸ್ಟಡಿ ಮುಂದುವರೆಯುವ ಆದೇಶವನ್ನು ನ್ಯಾಯಾಲಯ ಮಾಡಬಹುದು.

ಇನ್ನು ಬೆಳೆದ ಮಕ್ಕಳ ಸಂದರ್ಭದಲ್ಲಿ ಯಾರ ಹತ್ತಿರ ಮಗು ಇದ್ದರೆ ಒಳ್ಳೆಯದು ಎನ್ನುವುದನ್ನು ಕೂಲಂಕಷವಾಗಿ ಗಮನಿಸಿ, ಆದೇಶವನ್ನು ಮಾಡುತ್ತಾರೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳ ಕಸ್ಟಡಿಯನ್ನು ತಾಯಿಯ ಹತ್ತಿರವೇ ಉಳಿಸುವ ಸಂಭವ ಹೆಚ್ಚು. ಏನೇ ಆಗಲಿ, ಕಸ್ಟಡಿ ಯಾರ ಹತ್ತಿರ ಇರುವುದಿಲ್ಲವೋ ಆ ಪೋಷಕರು ಮಗುವಿನ ಜತೆ, ಮಾತಾಡಲು, ಭೇಟಿ ಮಾಡಲು, ಸಮಯ ಕಳೆಯಲು , ಕೆಲವು ದಿನಗಳು ಮಗುವನ್ನು ತಮ್ಮ ಹತ್ತಿರ ಇಟ್ಟು ಕೊಳ್ಳಲು, ಬೇರೆ ಊರುಗಳಿಗೆ ಕರೆದುಕೊಂಡು ಹೋಗಲು , ಇತ್ಯಾದಿಗಳಿಗೆ ವ್ಯವಸ್ಥೆ ಮಾಡಲು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡು ಅರ್ಜಿ ಹಾಕ ಬಹುದು. ಕಸ್ಟಡಿಯ ಪ್ರಶ್ನೆ ಅಂತಿಮವಾಗಿ ತೀರ್ಮಾನ ಆಗುವವರೆಗೆ, ಮಧ್ಯಂತರ ವ್ಯವಸ್ಥೆಯನ್ನು ನ್ಯಾಯಾಲಯದ ಸಹಾಯದಿಂದ ಸೂಕ್ತ ಪ್ರಕರಣಗಳಲ್ಲಿ ನಿರೀಕ್ಷಿಸ ಬಹುದು.