ನ್ಯೂಸ್

ವಂಚನೆ ಮಾಡಿ ಎಸ್ಕೇಪ್​ ಆಗಿದ್ದ ಬಿಗ್​ಬಾಸ್​ ಸ್ಪರ್ಧಿ ಸಪ್ನಾ, ಬಂಧನಕ್ಕೆ ಹೆದರಿ ಕೋರ್ಟ್ ಮುಂದೆ ಶರಣು!

ಲಖನೌ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಗಾಯಕಿ, ನೃತ್ಯಗಾತಿ ಹಾಗೂ ಬಿಗ್​ಬಾಸ್​ ಹಿಂದಿಯ 11ನೇ ಸೀಸನ್​ನ ಸ್ಪರ್ಧಿ ಸಪ್ನಾ ಚೌಧರಿ ಕೊನೆಗೂ ಕೋರ್ಟ್​ಗೆ ಹಾಜರು ಆಗಿದ್ದಾರೆ.

ವಂಚನೆ ಮಾಡಿ ಕೇಸ್​ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಸಪ್ನಾ ವಿರುದ್ಧ ಕೆಲ ತಿಂಗಳ ಹಿಂದೆ ಬಂಧನ ವಾರೆಂಟ್​ ಜಾರಿಯಾಗಿತ್ತು. ಹಾಗಾಗಿ ಸಪ್ನಾಗಾಗಿ ಪೊಲೀಸರು ಬಲೆ ಬೀಸಿದ್ದರು. ಹುಡುಕಾಟ ಕೂಡ ನಡೆದಿತ್ತು. ಇದೀಗ ಅವರು ಕೋರ್ಟ್ ಮುಂದೆ ಹಾಜರಾಗಿದ್ದಾರೆ.

ಆಗಿದ್ದೇನೆಂದರೆ, ಸಪ್ನಾ ಚೌಧರಿ ಅವರು 2018 ರಲ್ಲಿ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡುವುದಾಗಿ ಹೇಳಿದ್ದರು. ಇದಕ್ಕಾಗಿ ಸಂಘಟಕರು ಮುಂಗಡವಾಗಿ ಪಾವತಿಸಿದ್ದರು. ಆದರೆ ಸಪ್ನಾ ಹೇಳದೇ ಕೇಳದೇ ಕಾರ್ಯಕ್ರಮ ರದ್ದು ಮಾಡಿದ್ದರು. ಆದರೆ ತಮಗೆ ನೀಡಿದ್ದ ಮುಂಗಡ ಹಣವನ್ನು ಅವರು ವಾಪಸ್​ ನೀಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ಸಂಘಟಕರು ಸಪ್ನಾ ವಿರುದ್ಧ ದೂರು ದಾಖಲು ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಖುದ್ದು ಹಾಜರಿಗೆ ಲಖನೌ ಕೋರ್ಟ್​ ಹಲವು ಬಾರಿ ನಿರ್ದೇಶಿಸಿತ್ತು. ಇದರ ಹೊರತಾಗಿಯೂ ಸಪ್ನಾ ಹಾಜರು ಆಗಿರಲಿಲ್ಲ. ಅಷ್ಟೇ ಅಲ್ಲದೇ ತಮ್ಮ ಪರವಾಗಿ ಯಾವುದೇ ಮನವಿಯನ್ನೂ ಅವರು ಕೋರ್ಟ್​ಗೆ ಸಲ್ಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಈಗ ಬಂಧನ ವಾರೆಂಟ್​ ಹೊರಡಿಸಿತ್ತು.


ಇದೊಂದು ಪ್ರಕರಣ ಅಲ್ಲದೇ ಸಪ್ನಾ ವಿರುದ್ಧ ಇನ್ನೂ ಕೆಲವು ಕೇಸ್​ಗಳು ಇವೆ. 2021ರ ಫೆಬ್ರವರಿಯಲ್ಲಿ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಸಪ್ನಾ ವಿರುದ್ಧ ವಂಚನೆ ಮತ್ತು ನಂಬಿಕೆಯ ಉಲ್ಲಂಘನೆಯ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಿತ್ತು. ಸಪ್ನಾರನ್ನು ನಿರ್ವಹಿಸುವ ಸೆಲೆಬ್ರಿಟಿ ಮ್ಯಾನೇಜ್‌ಮೆಂಟ್ ಕಂಪೆನಿ ಕೂಡ ಸಪ್ನಾ ಸೇರಿದಂತೆ ಅವರ ತಾಯಿ, ಸಹೋದರರ ವಿರುದ್ಧ ವಂಚನೆ ಕೇಸ್​ ದಾಖಲು ಮಾಡಿದೆ.

ಮ್ಯಾಜಿಸ್ಟ್ರೇಟ್ ಮುಂದೆ ಶರಣಾದ ಸಪ್ನಾ, ತಮ್ಮಿಂದ ಯಾವುದೇ ತಪ್ಪು ಆಗಿಲ್ಲ, ತಾವು ವಂಚನೆಯನ್ನು ಮಾಡಿಲ್ಲ ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ಜಾರಿ ಆಗಿರುವ ಬಂಧನ ವಾರೆಂಟ್ ರದ್ದು ಮಾಡುವಂತೆ ಅವರು ಮನವಿ ಮಾಡಿಕೊಂಡರು. ಸಪ್ನಾ ಹೇಳಿಕೆಯನ್ನು ಆಲಿಸಿದ ಕೋರ್ಟ್ ಸದ್ಯ ಅರೆಸ್ಟ್ ವಾರೆಂಟ್ ರದ್ದು ಮಾಡಿದ್ದು ಮತ್ತೆ ಸೆಪ್ಟೆಂಬರ್ 30ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. (ಏಜೆನ್ಸೀಸ್​)