ನ್ಯೂಸ್

ಬೋನಸ್​ಗೆ ತಟ್ಟದ ಕರೊನಾ: ಕೇಂದ್ರದ ನೌಕರರಿಗೆ ಭರ್ಜರಿ ಗುಡ್​ನ್ಯೂಸ್​

ನವದೆಹಲಿ: ಪ್ರತಿ ವರ್ಷದ ದಸರಾ ಸಮಯದಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಬೋನಸ್ ನೀಡುತ್ತದೆ. ಆದರೆ ಈ ಈ ಬಾರಿ ಕರೊನಾ ವೈರಸ್​ ಹಿನ್ನೆಲೆಯಲ್ಲಿ ಬೋನಸ್​ ನೀಡಿಕೆ ಕಷ್ಟ ಎಂದೇ ಹೇಳಲಾಗುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಬೋನಸ್ ನೀಡುವ ನಿರ್ಧಾರ ತೆಗೆದುಕೊಂಡಿದ್ದು, ತನ್ನ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.

ಸಿ ಮತ್ತು ಡಿ ದರ್ಜೆ ನೌಕರರಿಗೆ 2019-20ನೇ ಸಾಲಿನ ಬೋನಸ್ ನೀಡಲು ಸಚಿವ ಸಂಪುಟದಲ್ಲಿ ನಿರ್ಧಾರವಾಗಿದೆ. ಇದರಿಂದ 30 ಲಕ್ಷ ನೌಕರರಿಗೆ ಒಟ್ಟು 3,737 ಕೋಟಿ ರೂಪಾಯಿ ಬೋನಸ್​ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಇದು ಸದಸ್ಯ ನಾನ್​ ಗೆಜೆಟೆಡ್​ ನೌಕರರಿಗೆ ಮಾತ್ರ ಅನ್ವಯ ಆಗಲಿದೆ. ಅಂದರೆ ಸಿ ಮತ್ತು ಡಿ ದರ್ಜೆ ನೌಕರರು ನಾನ್​ಗೆಜೆಡೆಟ್​ ವ್ಯಾಪ್ತಿಯಲ್ಲಿ ಬರುತ್ತಾರೆ. ರೈಲ್ವೆ, ಅಂಚೆ, ಇಪಿಎಫ್​ಒ, ಇಸಿಐಸಿಯಂಥ ವಾಣಿಜ್ಯ ಸರ್ಕಾರಿ ಸಂಸ್ಥೆಗಳಲ್ಲಿ ನಾನ್-ಗೆಜೆಟೆಡ್ ಉದ್ಯೋಗಿಗಳಿದ್ದಾರೆ. ಕೇಂದ್ರ ಸರ್ಕಾರದ ಅಧೀನದ ವಿವಿಧ ಇಲಾಖೆಗಳಲ್ಲಿ ಇಂಥ 30 ಲಕ್ಷ ನೌಕರರಿದ್ದಾರೆ. ಅವರಿಗೆ ಇದು ಅನ್ವಯ ಆಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 26ರಂದು ಇರುವ ವಿಜಯದಶಮಿ ಹಬ್ಬಕ್ಕೆ ಮುನ್ನ ಬೋನಸ್ ಹಣವನ್ನು ಎಲ್ಲಾ ಅರ್ಹ ಉದ್ಯೋಗಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬೋನಸ್​ಗೆ ಆಗ್ರಹಿಸಿ ನಿನ್ನೆಯಷ್ಟೇ ಸೌತ್​ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಕರೊನಾ ಇದ್ದರೂ ಈ ವರ್ಷ ಕಳೆದ ವರ್ಷಕ್ಕಿಂತ ಗೂಡ್ಸ್ ರೈಲುಗಳಿಂದ ಶೇಕಡಾ 110 ರಷ್ಟು ಆದಾಯ ಪಡೆಯಲಾಗಿದೆ. ಅದೇ ರೀತಿ ವಿಶೇಷ ಪ್ರಯಾಣಿಕರ ರೈಲಿನಿಂದಲೂ ಉತ್ತಮ ಆದಾಯ ಗಳಿಸಿದೆ, ಆದರೂ ಬೋನಸ್​ ಪ್ರಕಟಿಸಿಲ್ಲ ಎಂದು ಅವರು ಹೇಳಿದ್ದರು. ಇದೀಗ ಎಲ್ಲರಿಗೂ ಬೋನಸ್​ ಸಿಗಲಿದೆ.