ಸಾಂದರ್ಭಿಕ ಚಿತ್ರ 
ನ್ಯೂಸ್

ಸಿಬಿಎಸ್​ಇ 12ನೇ ತರಗತಿ ಫಲಿತಾಂಶ ಪ್ರಕಟ: ಶೇ.92ರಷ್ಟು ವಿದ್ಯಾರ್ಥಿಗಳು ಪಾಸ್​- ರಿಸಲ್ಟ್​ ಹೀಗೆ ನೋಡಿ..

suchetana

ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್​ಇ-Central Board of Secondary Education) 12 ನೇ ತರಗತಿ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಿದೆ. 12 ನೇ ತರಗತಿಯ ಅವಧಿ 2 ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳ ಜೊತೆಗೆ ಟರ್ಮ್ 1 ಮತ್ತು ಟರ್ಮ್ 2 ರ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಮಾಮೂಲಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಪರೀಕ್ಷೆಗಳನ್ನು ಟರ್ಮ್ 2 ಗಾಗಿ ಆಫ್‌ಲೈನ್ ಮೋಡ್‌ನಲ್ಲಿ ಏಪ್ರಿಲ್ 26, 2022 ರಿಂದ ಜೂನ್ 15, 2022 ರವರೆಗೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಕೇರಳದ ತಿರುವನಂತಪುರ ವಲಯ (98.83) ನಂ.1 ಸ್ಥಾನದಲ್ಲಿದ್ದು, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ (83.71) ಕೊನೆಯ ಸ್ಥಾನದಲ್ಲಿದೆ. ಒಟ್ಟು 14 ಲಕ್ಷದ 44 ಸಾವಿರದ 341 (14,44,341) ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಇದರಲ್ಲಿ 14 ಲಕ್ಷದ 35 ಸಾವಿರದ 366 ಮಂದಿ (14,35.366) ಪರೀಕ್ಷೆ ಬರೆದಿದ್ದು, ಈ ಪೈಕಿ 13 ಲಕ್ಷದ 30 ಸಾವಿರದ 662 (13,30,662) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಂದರೆ 92.71 ರಷ್ಟು ವಿದ್ಯಾರ್ಥಿಗಳು ಪಾಸ್​ ಆಗಿರುತ್ತಾರೆ.

ಈ ಪೈಕಿ 33 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 1.34 ಲಕ್ಷ ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 2020ರಲ್ಲಿ ಪರೀಕ್ಷೆ ನಡೆದಾಗ 88.78% ವಿದ್ಯಾರ್ಥಿಗಳು ಪಾಸ್​ ಆಗಿದ್ದರು. 2020 ಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಗಣನೀಯ ಸುಧಾರಣೆಯಾಗಿದೆ. 2021 ರಲ್ಲಿ 99.37% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಆದರೆ ಕೋವಿಡ್​ ಹಿನ್ನೆಲೆಯಲ್ಲಿ ಬೋರ್ಡ್ ಪರೀಕ್ಷೆ ಬರೆದಿರಲಿಲ್ಲ.

ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ cbseresults.nic.in ನಲ್ಲಿ ಪರಿಶೀಲಿಸಬಹುದು. ಶಾಲೆಯ ಕೋಡ್, ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಫಲಿತಾಂಶ ನೋಡಬಹುದಾಗಿದೆ. digilocker.gov.inನಲ್ಲಿಯೂ ಫಲಿತಾಂಶ ಲಭ್ಯ. ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆ ಸೇರಿದಂತೆ ಅಗತ್ಯ ವಿವರಗಳನ್ನು ನಮೂದಿಸಿ. ಅಲ್ಲಿ ತಿಳಿಸಿರುವಂತೆ ಮಾಡುತ್ತಾ ಹೋದರೆ ಫಲಿತಾಂಶ ನೋಡಬಹುದು. (ಏಜನ್ಸೀಸ್​)