ಲಖನೌ: ಬೈಕ್‌ನಲ್ಲಿ ಅಪಾಯಕಾರಿ ಸ್ಟಂಟ್, ವ್ಹೀಲಿಂಗ್ ಮಾಡಿ ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಿರುವ ಅನೇಕ ಯುವಕ- ಯುವತಿಯರು ದಿನವೂ ಕಾಣಿಸುತ್ತಿದ್ದಾರೆ. ಪ್ರಾನವನ್ನು ಪಣಕ್ಕಿಟ್ಟು ಇಂಥದ್ದೊಂದು ಸ್ಟಂಟ್ ಮಾಡುವುದು ಎಂದರೆ ಕೆಲವರಿಗೆ ಅದೇನೋ ಹುಚ್ಚು. ಆದರೆ ಸಾರ್ವಜನಿಕ ಸ್ಥಳಗಳಲ್ಲಿಯೇ, ರಸ್ತೆಯ ನಡುವೆಯೇ ಎಲ್ಲರೂ ನೋಡಲಿ ಎನ್ನುವ ಕಾರಣಕ್ಕೆ ಸ್ಟಂಟ್ ಮಾಡುವುದು ಮಾಮೂಲಾಗಿದೆ. ಇದರಿಂದ ತಮ್ಮ ಪ್ರಾಣಕ್ಕಷ್ಟೇ ಅಲ್ಲದೇ, ರಸ್ತೆಯಲ್ಲಿ ಹೋಗುವ ಇತರ ವಾಹನ ಸವಾರರ ಪ್ರಾಣವನ್ನೂ ತೆಗೆಯುವಲ್ಲಿ ಇವರು ಹಿಂದೆ ಬೀಳುವುದಿಲ್ಲ.
ಇದೇ ಕಾರಣಕ್ಕಾಗಿ ಸ್ಟಂಟ್ ಮಾಡುವ ಯುವಕ ಯುವತಿಯನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಇದು ಬೈಕ್ ಸ್ಟಂಟ್ ಮಾತಾಯಿತು.
ಇದೀಗ ಈ ಕ್ರೇಜ್ ಕೂಡ ಸ್ವಲ್ಪ ಕಡಿಮೆಯಾಗಿ ಕಾರಿನಲ್ಲಿ ಸ್ಟಂಟ್ ಅಂದರೆ ಡೇರ್‌ಡೆವಿಲ್ ಶುರು ಮಾಡಿಕೊಂಡಿದ್ದಾರೆ. ಇಂಥದ್ದೇ ಒಬ್ಬ ಯುವಕ ತನ್ನ ಪ್ರಾಣಕ್ಕೆ ಕುತ್ತು ತಂದುಕೊಳ್ಳುವುದು ಮಾತ್ರವಲ್ಲದೇ ಇತರರ ಜೀವಕ್ಕೂ ಅಪಾಯ ತಂದೊಡುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿರುವ ಪೊಲೀಸರು ಅವನ ವಿಡಿಯೋ ಶೇರ್ ಮಾಡಿದ್ದಾರೆ.
ಉತ್ತರ ಪ್ರದೇಶದ ಉಜ್ವಲ್ ಯಾದವ್ ಎಂಬ ಈ ಯುವಕ ಚಲಿಸುತ್ತಿರುವ ಕಾರೊಂದರ ಮೇಲೆ ಪುಶ್-ಅಪ್ ಮಾಡುತ್ತಿದ್ದ. ಇದನ್ನು ತಾನು ಶೇರ್ ಮಾಡಿಕೊಂಡಿದ್ದ. ಇದು ವೈರಲ್ ಆಗುತ್ತಿದ್ದಂತೆಯೇ ಉತ್ತರ ಪ್ರದೇಶ ಪೊಲೀಸರು, ಆತನ ವಿಡಿಯೋಗೆ 'ಕಾಫಿನ್ ಡ್ಯಾನ್ಸ್'ನ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸೇರಿಸಿ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಈ ರೀತಿ ಪುಶ್ ಅಪ್ ಮಾಡಿದರೆ ಕಾನೂನಿನ ಕಣ್ಣುಗಳು ನಿಮ್ಮ ಮೇಲೆ ಇರುತ್ತವೆ ಎನ್ನುವ ಸಂದೇಶವನ್ನು ಇಲ್ಲಿ ನೀಡಲಾಗಿದೆ ಎಂದು ಪೊಲೀಸರು ಬರೆದಿದ್ದಾರೆ.
ಆದರೆ ಈ ಎಚ್ಚರಿಕೆಯ ಸಂದೇಶದ ಹೊರತಾಗಿಯೂ ಯುವಕನ ಸ್ಟಂಟ್ ನೋಡಿ ಮೆಚ್ಚಿಕೊಂಡು ಹಲವರು ಕಮೆಂಟ್ ಮಾಡತ್ತಿದ್ದಾರೆ!
ನೀವೂ ನೋಡಿ ಈ ಸ್ಟಂಟ್ ವಿಡಿಯೋ ಮತ್ತು ಎಚ್ಚರಿಕೆಯ ಸಂದೇಶ