ನ್ಯೂಸ್

ಪ್ಲೀಸ್‌ ತಪ್ಪಾಯ್ತು ಬಿಟ್‌ಬಿಡ್ರಪ್ಪಾ... ಮಹಿಳೆಯರ ಸಿಟ್ಟೆಂದ್ರೆ ಸುಮ್ನೆನಾ? ಎಡವಟ್ಟು ಮಾಡಿ ತಗ್ಲಾಕೊಂಡ ಬರ್ಗರ್‌ ಕಿಂಗ್‌!

ಲಂಡನ್‌: ನಿನ್ನೆ ಅಂತಾರಾಷ್ಟ್ರೀಯ ಮಹಿಳಾ ದಿನ. ಈ ದಿನದಂದು ಎಲ್ಲೆಲ್ಲೂ ಮಹಿಳೆಯರ ಗುಣಗಾನವೇ ನಡೆಯುತ್ತದೆ. ಅದೇ ರೀತಿ ಬರ್ಗರ್‌ ಕಿಂಗ್‌ ಎಂಬ ಲಂಡನ್‌ನಲ್ಲಿ ಅಂತಾರಾಷ್ಟ್ರೀಯ ಪ್ರಸಿದ್ಧ ಕಂಪೆನಿ, ಫಾಸ್ಟ್ ಫುಡ್ ದೈತ್ಯ ಕೂಡ ಮಹಿಳೆಯರನ್ನು ಹೊಗಳಲು ಹೋಗಿದೆ. ಆದರೆ ಆದದ್ದು ಎಡವಟ್ಟು ಆಗಿಬಿಟ್ಟಿದೆ.

ಮಹಿಳೆಯರಾಗಿ ತಮ್ಮ ಹೊಸ ಪಾಕಶಾಸ್ತ್ರ ಸ್ಕಾಲರ್‌ಷಿಪ್‌ ಪ್ರೋಗ್ರಾಮ್‌ನಲ್ಲಿ ಮಹಿಳೆಯರ ಬಗ್ಗೆ ಏನೋ ಹೇಳಲು ಹೋಗಿ ಏನೇನೋ ಆಗಿ ಇಡೀ ವಿಶ್ವದ ಮಹಿಳಾಮಣಿಗಳ ಕೆಂಗಣ್ಣಿಗೆ ಗುರಿಯಾಗಿದೆ ಬರ್ಗರ್‌ ಕಿಂಗ್‌. ಇದು ಮಾಡಿದ ಒಂದು ಟ್ವೀಟ್‌ ಕೆಲವೇ ಗಂಟೆಗಳಲ್ಲಿ ವಿಶ್ವವ್ಯಾಪಿ ಶೇರ್‌ ಆಗಿ ಹಲವಾರು ಮಂದಿ ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು ಬರ್ಗರ್‌ ಕಿಂಗ್‌ ಕಂಪೆನಿಯನ್ನೇ ಮುಚ್ಚಿಸುವಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಅಂಥದ್ದೇನು ಟ್ವೀಟ್‌ ಎಂದರೆ, ಮಹಿಳೆಯರಿಗಾಗಿ ಈ ಸ್ಕಾಲರ್‌ಷಿಪ್‌ ಇದೆ ಎಂದು ಹೇಳುವಾಗ ಮಹಿಳೆಯರು ಅಡುಗೆ ಮನೆಗೆ ಸೇರಿದವರಾಗಿದ್ದಾರೆ ಎಂದು ಬರೆದುಕೊಂಡಿದೆ. ಪಾಕಶಾಸ್ತ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಈ ವೇತನಗಳನ್ನು ನೀಡುವ ಬಗ್ಗೆ ಹೇಳಿಕೊಳ್ಳುವ ಆರಂಭದಲ್ಲಿ ಅದು ಈ ಲೈನ್‌ ಸೇರಿಸಿಬಿಟ್ಟಿದೆ. ಮಹಿಳೆಯರು ಅಡುಗೆ ಮನೆಗೆ ಸೇರಿದವರಾಗಿದ್ದಾರೆ ಎಂದು ಟ್ವೀಟ್‌ ಮಾಡಿದೆ ಕಂಪೆನಿ.

ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ದಾಪುಗಾಲು ಹಾಕಿ, ಹಲವಾರು ಕ್ಷೇತ್ರಗಳಲ್ಲಿ ಪುರುಷರನ್ನು ಮೀರಿಸುವ ಮಟ್ಟಿಗೆ ಬೆಳೆದಿರುವಾಗ, ಗೃಹಿಣಿಯಾಗಿದ್ದರೂ ಅದರ ಜತೆಜತೆಗೆ ತನ್ನ ಕ್ಷೇತ್ರದಲ್ಲಿ ಮಹಾಸಾಧನೆ ಮಾಡುತ್ತಿರುವ ಈ ಹೊತ್ತಿನಲ್ಲಿ ಮಹಿಳೆಯರು ಅಡುಗೆ ಮನೆಗೆ ಸೇರಿದವರು ಎಂದು ಹೇಳಲು ಎಷ್ಟು ಧೈರ್ಯ ಎಂದು ಹಿಗ್ಗಾಮುಗ್ಗ ಕಂಪೆನಿಯನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾನು ಮಾಡಿರುವ ಎಡವಟ್ಟನ್ನು ತಿಳಿಯುತ್ತಲೇ ಕಂಪೆನಿ ಮಹಿಳೆಯರ ಕ್ಷಮೆಯಾಚಿಸಿದೆ, ಜತೆಗೆ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದೆ. ನಂತರ ಕ್ಷಮೆ ಯಾಚಿಸಿ ಟ್ವೀಟ್ ಮಾಡಿದ ಬರ್ಗರ್ ಕಿಂಗ್, 'ನಾವು ನಿಮ್ಮ ಮಾತನ್ನು ಕೇಳುತ್ತೇವೆ. ನಮ್ಮ ಟ್ವೀಟ್ ತಪ್ಪಾಗಿದೆ, ಇದಕ್ಕಾಗಿ ವಿಷಾದಿಸುತ್ತೇವೆ. ದಯವಿಟ್ಟು ಕೋಪ ಮಾಡಿಕೊಳ್ಳಬೇಡಿ. ನಮ್ಮನ್ನು ಕ್ಷಮಿಸಿಬಿಡಿ. ಲಂಡನ್‌ನ ಅಡುಗೆ ಮನೆಯಲ್ಲಿ ಕೇವಲ 20 ಪ್ರತಿಶತ ವೃತ್ತಿಪರ ಬಾಣಸಿಗರು ಮಹಿಳೆಯರಿದ್ದಾರೆ, ಉಳಿದವರು ಪುರುಷರೇ. ನಮ್ಮ ಉದ್ದೇಶ ಮಹಿಳೆಯರಿಗೆ ಅವಹೇಳನ ಮಾಡುವುದು ಆಗಿರಲಿಲ್ಲ. ಪಾಕಶಾಸ್ತ್ರ ವಿದ್ಯಾರ್ಥಿವೇತನಗಳನ್ನು ನೀಡುವ ಮೂಲಕ ಅವರಿಗೆ ಪಾಕಶಾಸ್ತ್ರದಲ್ಲಿ ವಿದ್ಯಾರ್ಥಿವೇತನ ನೀಡುವುದು ನಮ್ಮ ಗುರಿ’ ಎಂದೆಲ್ಲಾ ಸಮಜಾಯಿಷಿ ಕೊಟ್ಟು ಮಹಿಳೆಯರ ಕೋಪವನ್ನು ಶಮನಗೊಳಿಸಲು ಯತ್ನಿಸುತ್ತಿದೆ.

ಆದರೆ ಅದರ ಮೂಲ ಟ್ವೀಟ್‌ ಮಾತ್ರ ಶೇರ್‌ ಆಗುತ್ತಲೇ ಇದ್ದು, ಹಲವಾರು ರೀತಿಯಲ್ಲಿ ಆಕ್ರೋಶ ಹೊರಹಾಕಲಾಗುತ್ತಿದೆ.