ಹೈದರಾಬಾದ್: ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಅವರಿಗೆ ಒಂದು ವರ್ಷಗಳ ಶಿಕ್ಷೆ ವಿಧಿಸಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.
2015ರಲ್ಲಿ ನಡೆದಿರುವ ಪ್ರಕರಣ ಇದಾಗಿದೆ. 2015ರ ಡಿಸೆಂಬರ್ 12ರಂದು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಗೋಮಾಂಸ ಹಬ್ಬ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಇದನ್ನು ಪ್ರತಿಭಟಿಸಿ ಕೆಲವು ಬಿಜೆಪಿ ನಾಯಕರು ಸ್ಥಳಕ್ಕೆ ಆಗಮಿಸಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.
ಪೊಲೀಸ್ ಇನ್ಸ್ಪೆಕ್ಟರ್ ಮಲ್ಲೇಶ್ ಅವರು ಕೂಡ ಅಲ್ಲಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಾಗ ಮಲ್ಲೇಶ್ ಅವರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪವನ್ನು ರಾಜಾ ಸಿಂಗ್ ಎದುರಿಸುತ್ತಿದ್ದಾರೆ. ಹಲ್ಲೆ ನಡೆಸಿರುವುದು ನಿಜ ಎಂದ ಸೆಷನ್ಸ್ ಕೋರ್ಟ್ ಒಂದು ವರ್ಷ ಜೈಲುಶಿಕ್ಷೆ ನೀಡಿದೆ.
ಈ ಶಿಕ್ಷೆಯನ್ನು ಪ್ರಶ್ನಿಸಿ ರಾಜಾ ಸಿಂಗ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಅವರನ್ನು ಕೋರ್ಟ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಹಿಂಸಾಚಾರ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ವಿವಾದ ಸೃಷ್ಟಿಸಿದ್ದ ಶಾಸಕ ರಾಜಾ ಸಿಂಗ್ ಅವರನ್ನು ಫೇಸ್ಬುಕ್ನಿಂದ ಕಳೆದ ಸೆಪ್ಟೆಂಬರ್ನಲ್ಲಿ ನಿಷೇಧಿಸಲಾಗಿತ್ತು.