ನ್ಯೂಸ್

ಮಹಾರಾಷ್ಟ್ರ ಬಿಜೆಪಿ ಘಟಕಕ್ಕೆ ಹೊಸಬರ ನೇಮಕ: ಮಾಜಿ ಸಚಿವರಿಗೆ ಒಲಿದ ಹುದ್ದೆ

ಮುಂಬೈ: ಏಕನಾಥ ಶಿಂಧೆ ಜತೆಯಾಗಿ ನೂತನ ಸರ್ಕಾರ ರಚಿಸಿದ ಬೆನ್ನಲ್ಲೇ ಬಿಜೆಪಿಯು ಮಹಾರಾಷ್ಟ್ರ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕಾಗಿ ಮಾಡಿದೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರಿಗೆ ಆಪ್ತರಾಗಿರುವ ಇಬ್ಬರು ನಾಯಕರನ್ನು ನೇಮಕ ಮಾಡಿದೆ.

ಮಾಜಿ ಇಂಧನ ಸಚಿವ ಮತ್ತು ಒಬಿಸಿ ನಾಯಕ ಚಂದ್ರಶೇಖರ್ ಭಾವಾಂಕುಲೆ ಅವರನ್ನು ಮಹಾರಾಷ್ಟ್ರ ಬಿಜೆಪಿ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾದರೆ, ಮಾಜಿ ಶಿಕ್ಷಣ ಸಚಿವ ಮತ್ತು ಮರಾಠ ನಾಯಕ ಆಶೀಶ್ ಶೇಲಾರ್ ಮುಂಬೈ ಘಟಕದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಬವಾನ್​ಕುಲೆ ಮತ್ತು ಶೆಲಾರ್ ನೇಮಕದ ಘೋಷಣೆ ಮಾಡಿದ್ದಾರೆ. ಭಾವಾಂಕುಲೆ ಅವರು ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರಿಗೂ ಅತ್ಯಂತ ಆತ್ಮೀಯರು ಎನ್ನಲಾಗಿದೆ.

ಕುತೂಹಲದ ಸಂಗತಿ ಎಂದರೆ, 2019 ರ ವಿಧಾನಸಭಾ ಚುನಾವಣೆಯಲ್ಲಿ ಭಾವಾಂಕುಲೆ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಅವರು ಜೂನ್ 20ರಂದು ರಾಜ್ಯ ಪರಿಷತ್ತಿಗೆ ಆಯ್ಕೆಯಾಗಿದ್ದರು. ಇನ್ನು, ಮುಂಬೈ ಬಿಜೆಪಿ ಮುಖ್ಯಸ್ಥರಾಗಿದ್ದ ಶೇಲಾರ್ ಅವರಿಗೆ ಸಚಿವ ಸ್ಥಾನವನ್ನು ನಿರಾಕರಿಸಲಾಗಿತ್ತು.

ಸದ್ಯದಲ್ಲಿಯೇ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ್ತು ಲೋಕಸಭೆ- ವಿಧಾನಸಭಾ ಚುನಾವಣೆಗಳಲ್ಲಿ ಮಿಷನ್ 45 ಸಾಧಿಸಲು ಬಿಜೆಪಿ ಒಬಿಸಿ ಕಾರ್ಡ್ ಪ್ರಯೋಗಿಸಲು ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಈ ಮೂಲಕ ಬಿಜೆಪಿ ಪಕ್ಷವು ಗರಿಷ್ಠ 48 ಲೋಕಸಭಾ ಸ್ಥಾನಗಳನ್ನು ಮತ್ತು 288 ವಿಧಾನಸಭಾ ಸ್ಥಾನಗಳಲ್ಲಿ 170 ಪ್ಲಸ್ ಸ್ಥಾನಗಳನ್ನು ಗೆಲ್ಲಲು ಯೋಜಿಸಿದೆ. ಇವರಿಬ್ಬರೂ ಈಗಾಗಲೇ ಬಿಜೆಪಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿ ಭೇಷ್​ ಎನಿಸಿಕೊಂಡವರು. (ಏಜೆನ್ಸೀಸ್​)