ನ್ಯೂಸ್

'ಇಲ್ಲಿರೋರು ಕಳ್ಳರು, ನಾನು ಅವರ ನಾಯಕ' ಎಂದಿದ್ದ ಕೃಷಿ ಸಚಿವ ರಾಜೀನಾಮೆ: ಸುಧಾಕರ್​ ಹೇಳಿದ್ದೇನು ಕೇಳಿ...

ಕೈಮೂರ್ (ಬಿಹಾರ): ನಮ್ಮ ಇಲಾಖೆಯಲ್ಲಿ ಹಲವಾರು ಕಳ್ಳರಿದ್ದಾರೆ, ನಾನೇ ಅವರ ನಾಯಕ ಎಂದು ಬಿಹಾರ ಕೃಷಿ ಸಚಿವ ಸುಧಾಕರ ಸಿಂಗ್ ಇತ್ತೀಚೆಗೆ ಹೇಳಿಕೆ ನೀಡಿ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರನ್ನು ಪೇಚಿಗೆ ಸಿಲುಕಿಸಿದ್ದರು. ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸಿಂಗ್‌ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.


ಬಿಹಾರದ ಕೈಮೂರ್​ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಇತ್ತೀಚಿಗೆ ಮಾತನಾಡಿದ್ದ ಸಚಿವ ಸಿಂಗ್, ತಮ್ಮದೇ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ‘ನಾನು ಸಚಿವನಾಗಿರುವ ಕೃಷಿ ಇಲಾಖೆಯಲ್ಲಿ ಹಲವಾರು ಕಳ್ಳರಿದ್ದು, ನಾನು ಆ ಕಳ್ಳರ ಸರ್ದಾರ್, ನನ್ನ ಮೇಲೆ ಇನ್ನೂ ಅನೇಕ ನಾಯಕರು ಇದ್ದಾರೆ​’ ಎಂದಿದ್ದರು. ‘ನಮ್ಮ ಕೃಷಿ ಇಲಾಖೆಯಲ್ಲಿ ಕಳ್ಳತನ ಮಾಡದೇ ಇರುವ ಒಂದೇ ಒಂದು ವಿಭಾಗವೂ ಇಲ್ಲ. ಸರ್ಕಾರ ಬದಲಾದರೂ ಸರ್ಕಾರದ ಕಾರ್ಯವೈಖರಿ ಮಾತ್ರ ಮೊದಲಿನಂತೆಯೇ ಇದೆ’ ಎಂದು ಸುಧಾಕರ ಸಿಂಗ್ ಆರೋಪಿಸಿದ್ದರು.

“ಭತ್ತ ಖರೀದಿಸಲು ಹಲವು ಏಜೆನ್ಸಿಗಳನ್ನು ತೊಡಗಿಸಿಕೊಳ್ಳುವಂತೆ ನಾನು ಸರ್ಕಾರವನ್ನು ಕೇಳುತ್ತಿದ್ದೇನೆ, ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ನಾನು ಅಧಿಕಾರಶಾಹಿಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ದೊಡ್ಡ ರಾಜಕಾರಣಿಗಳ ಬಗ್ಗೆ ಮಾತನಾಡುತ್ತೇನೆ. ನಾನು ರೈತರಿಂದ ಧಾನ್ಯಗಳನ್ನು ಖರೀದಿಸಲು ಮಂಡಿಗಳು ಬೇಕೆಂದಾಗ ಅದನ್ನು ಪರಿಗಣಿಸಲಿಲ್ಲ … ಐಸೆ ಲಗಾ ಜೈಸೇ ಸಾಮ್ನೇವಾಲೆ ಕೊ ಬುಖಾರ್ ಹೋ ಗಯಾ ಹೋ (ನನ್ನ ಸಲಹೆಗಳನ್ನು ಕೇಳಿದ ನಂತರ ನನ್ನ ಎದುರಿಗಿದ್ದ ವ್ಯಕ್ತಿಗೆ ಜ್ವರ ಬಂದಂತೆ ತೋರುತ್ತಿದೆ) ಎಂದು ಆಕ್ರೋಶ ವ್ಯಕ್ತಪಡಿಸಿ ಈಗ ರಾಜೀನಾಮೆ ನೀಡಿದ್ದಾರೆ.

‘ಕೈಮೂರು ಜಿಲ್ಲೆಯಿಂದ ಇಬ್ಬರು ಸಚಿವರಿದ್ದಾರೆ. ಆದರೂ ಪರಿಸ್ಥಿತಿ ಬದಲಾಗಿಲ್ಲ. ಕೈಮೂರ್ ಜಿಲ್ಲೆ ಭ್ರಷ್ಟ ಅಧಿಕಾರಿಗಳಿಂದ ತುಂಬಿಹೋಗಿದೆ. ರೈತರಿಗೆ ಪರಿಹಾರ ನೀಡುವ ನೆಪದಲ್ಲಿ ಬಿಹಾರ ಬೀಜ ನಿಗಮವು 200 ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿದೆ’ ಎಂದು ಸಿಂಗ್​ ಆರೋಪಿಸಿದ್ದಾರೆ.

ಅಂದಹಾಗೆ, ಸುಧಾಕರ್ ಸಿಂಗ್, ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ ಸಿಂಗ್ ಅವರ ಪುತ್ರ. ಇವರು ಬಕ್ಸರ್‌ನ ರಾಮಗಢ ಕ್ಷೇತ್ರದ ಶಾಸಕ. ಪ್ರವಾಸೋದ್ಯಮ ಸಚಿವ ಕುಮಾರ್ ಸರ್ವಜೀತ್ ಅವರನ್ನು ರಾಜ್ಯದ ನೂತನ ಕೃಷಿ ಸಚಿವರನ್ನಾಗಿ ನೇಮಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ನಿರ್ವಹಿಸಲಿದ್ದಾರೆ.

ಬಿಹಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್‌ ಜೈಸ್ವಾಲ್‌ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಬಿಹಾರದಲ್ಲಿ ರೈತರು ಅಸಮಾಧಾನ ಹೊಂದಿದ್ದಾರೆ. ಕೃಷಿ ಇಲಾಖೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ. ಅಧಿಕಾರಿಗಳು ಸರ್ಕಾರವನ್ನು ಆಳುತ್ತಿದ್ದಾರೆ. ನಿತೀಶ್‌ ಕುಮಾರ್‌, ತೇಜಸ್ವಿ ಯಾದವ್‌ ಜೈಲಿಗೆ ಹೋಗಲಿ ಎಂದು ಕಾಯುತ್ತಿದ್ದಾರೆ. ಆ ಮೂಲಕ ತಾವೊಬ್ಬರೇ ಸಿಎಂ ಆಗಿರಬೇಕು' ಎಂದು ಬಯಸಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್​)