ನ್ಯೂಸ್

ಲೂಸ್​ ಪ್ಯಾಕೆಟ್​ಗಳಲ್ಲಿ ಈ ರಾಜ್ಯದಲ್ಲಿ ಇನ್ಮುಂದೆ ಎಣ್ಣೆ ಮಾರಾಟವಿಲ್ಲ- ಇದು ಹೈಕೋರ್ಟ್​ ಆದೇಶ

ಚೆನ್ನೈ: ಅಡುಗೆ ಎಣ್ಣೆಯಲ್ಲಿ ಭಾರಿ ಕಲಬೆರಕೆ ಆಗುತ್ತಿರುವ ಬಗ್ಗೆ ತುಂಬಾ ಗಂಭೀರವಾಗಿ ಪರಿಗಣಿಸಿರುವ ಮದ್ರಾಸ್​ ಹೈಕೋರ್ಟ್​, ಇನ್ನು ಮುಂದೆ ತಮಿಳುನಾಡಿನಲ್ಲಿ ಅಡುಗೆ ಎಣ್ಣೆಯನ್ನು ಲೂಸ್​ ಪ್ಯಾಕೆಟ್​ಗಳಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ತಿನ್ನಲು ಬಳಸುತ್ತಿರುವ ಈ ತೈಲದಲ್ಲಿ ಅಪಾರ ಪ್ರಮಾಣ ಕಲಬೆರಕೆ ಆಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್​.ಕಿರುಬಂಕರನ್​ ನೇತೃತ್ವದ ಪೀಠ, ಈ ಮಧ್ಯಂತರ ಆದೇಶ ಹೊರಡಿಸಿದೆ. ಕೋರ್ಟ್​ನ ಮುಂದಿನ ತೀರ್ಪಿನವರೆಗೆ ಲೂಸ್​ ಪ್ಯಾಕೇಟ್​ಗಳಲ್ಲಿ ತೈಲ ಮಾರಾಟ ಮಾಡುವಂತಿಲ್ಲ ಎಂದು ಹೇಳಿದೆ.

ಈ ರೀತಿ ಅಡುಗೆ ಎಣ್ಣೆಯಲ್ಲಿ ಕಲಬೆರಿಕೆ ಮಾಡುತ್ತಿರುವುದು ಅತ್ಯಂತ ಅಪಾಯಕಾರಿ ಹಾಗೂ ಇದು ಅತ್ಯಂತ ಕಳವಳಕಾರಿ ವಿಷಯ ಎಂದು ಕೋರ್ಟ್​ ಅಭಿಪ್ರಾಯ ಪಟ್ಟಿದೆ. ಆದ್ದರಿಂದ ಇಂಥ ಕಲಬೆರಕೆ ಮಾಡುತ್ತಿರುವವರ ವಿರುದ್ಧ ತಮಿಳುನಾಡು ಗೂಂಡಾಕಾಯ್ದೆ-1982ರ ಅಡಿ ಶಿಕ್ಷೆ ನೀಡುವ ಅವಶ್ಯಕತೆ ಇದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಅಯ ಪಟ್ಟಿದ್ದಾರೆ.

ಕಲಬೆರಕೆ ಮಾಡುವವರು, ಅದನ್ನು ತಯಾರಿಸುವವರು, ವಿತರಕರು ಹಾಗೂ ಮಾರಾಟಗಾರರು ಎಲ್ಲರನ್ನೂ ತಪ್ಪಿತಸ್ಥರನ್ನಾಗಿ ಮಾಡುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.

ಈ ರೀತಿ ಕಲಬೆರಕೆ ಮಾಡುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದು ಮಾತ್ರವಲ್ಲದೇ, ಮನುಷ್ಯನ ಇಡೀ ನರವ್ಯೂಹವನ್ನೇ ಅಪಾಯದ ಅಂಚಿನಲ್ಲಿ ತರುತ್ತದೆ. ಮಾತ್ರವಲ್ಲದೇ, ದೃಷ್ಟಿದೋಷ, ವಾಕರಿಕೆ, ವಾಂತಿ, ತಲೆತಿರುಗುವಿಕೆ, ತಲೆನೋವು ಸೇರಿದಂತೆ ಮಾರಣಾಂತಿಕ ಕಾಯಿಲೆಗಳನ್ನೂ ಇದು ತರಬಲ್ಲುದು. ಇವೆಲ್ಲಾ ಗೊತ್ತಿದ್ದರೂ ಈ ರೀತಿ ಕಲಬೆರಕೆ ಮಾಡಿ ಜನರ ಜೀವದ ಜತೆ ಚೆಲ್ಲಾಟವಾಡುವುದು ನಾವು ಸಹಿಸಲ್ಲ ಎಂದು ಕೋರ್ಟ್​ ಹೇಳಿದೆ.

ತಮಿಳುನಾಡಿನಲ್ಲಿ ಎಣ್ಣೆ ತಯಾರಿಕೆ ಘಟಕಗಳು ಎಷ್ಟಿವೆ, ಯಾವ್ಯಾವ ಪ್ರಯೋಗಾಲಯಗಳಲ್ಲಿ ಇದರ ಗುಣಮಟ್ಟದ ಪರೀಕ್ಷೆ ನಡೆಯುತ್ತದೆ, ಅದರ ಉಸ್ತುವಾರಿ ವಹಿಸಿರುವವರು ಯಾರು ಇತ್ಯಾದಿಗಳ ಬಗ್ಗೆ ಸರ್ಕಾರದಿಂದ ನ್ಯಾಯಮೂರ್ತಿಗಳು ಮಾಹಿತಿ ಬಯಸಿದ್ದಾರೆ.