ನ್ಯೂಸ್

ಮಗು ಹುಟ್ಟುವ ಶುಭ ಮುಹೂರ್ತ ಹೇಳದಿರಲು ಜ್ಯೋತಿಷಿಗಳ ತೀರ್ಮಾನ! ಯಾಕೆ ಅಂತೀರಾ? ಇಲ್ಲಿದೆ ಇಂಟರೆಸ್ಟಿಂಗ್‌ ಸ್ಟೋರಿ...

ಹೈದರಾಬಾದ್‌: ಮಗು ಹುಟ್ಟಿದ ತಕ್ಷಣ ಹಿಂದೂ ಸಮುದಾಯದಲ್ಲಿ ಸಾಮಾನ್ಯವಾಗಿ ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಇದಕ್ಕೆ ಕಾರಣ, ಒಂದು ಮಗುವಿನ ಜೀವನದ ಸಂಪೂರ್ಣ ಭವಿಷ್ಯವನ್ನು ಈ ಜ್ಯೋತಿಷಿಗಳು ಹೇಳುತ್ತಾರೆ ಎಂಬ ನಂಬಿಕೆ. ಮಗುವಿನ ಹುಟ್ಟಿದ ಸಮಯ ಇತ್ಯಾದಿಗಳ ಆಧಾರದ ಮೇಲೆ ಜಾತಕ ಬರೆಯಬೇಕಿದ್ದರೆ, ಜ್ಯೋತಿಷಿಗಳ ಅವಶ್ಯಕತೆ ತುಂಬಾ ಇದೆ.

ಆದರೆ ತೆಲಂಗಾಣದ ಜ್ಯೋತಿಷಿಗಳು ಇದೀಗ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅದೇನೆಂದರೆ ಶಸ್ತ್ರಚಿಕಿತ್ಸೆಯ (ಸಿಜರಿಯನ್‌) ಡೆಲಿವರಿ ಮೂಲಕ ಹೆರಿಗೆ ಯಾವಾಗ ಮಾಡಿಸಬೇಕು ಎಂಬ ಬಗೆಗಿನ ಶುಭ ಮುಹೂರ್ತವನ್ನು ನಿಗದಿಪಡಿಸದಿರಲು ಪುರೋಹಿತರು, ಜ್ಯೋತಿಷಿಗಳು ನಿರ್ಧರಿಸಿದ್ದಾರೆ.

ಇದೆಂಥ ವಿಚಿತ್ರ ಅಂತೀರಾ? ಇದಕ್ಕೆ ಕಾರಣವೂ ಇದೆ. ಹಿಂದೆಲ್ಲಾ ನಾರ್ಮಲ್‌ ಹೆರಿಗೆ ಮಾಮೂಲಾಗಿತ್ತು. ಸಿಜರಿಯನ್‌ ಎಂದರೆ ಏನು ಎಂದೇ ಅರಿತಿರಲಿಲ್ಲ. ಆದರೆ ಇದೀಗ ಈ ಡೆಲವರಿಯೇ ಮಾಮೂಲಾಗಿಬಿಟ್ಟಿದೆ. ಸಾಮಾನ್ಯ ಹೆರಿಗೆ ಆಗುವುದಿದ್ದರೂ ದುಡ್ಡಿನ ದುರಾಸೆಗೆ ಬಿದ್ದು ಒಂದೆಡೆ ವೈದ್ಯರು ಸಿಜರಿಯನ್‌ ಮಾಡಿಸುತ್ತಿದ್ದರೆ, ಸಮಯ, ದಿನ, ಮುಹೂರ್ತ ಇತ್ಯಾದಿಗಳನ್ನು ಮೊದಲೇ ನಿಗದಿ ಮಾಡಿ ಅದರ ಆಧಾರದ ಮೇಲೆ ಶುಭ ಮುಹೂರ್ತದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಪಡೆಯಲು ಅಪ್ಪ-ಅಮ್ಮ ನಿರ್ಧರಿಸುವುದು ಇನ್ನೊಂದೆಡೆ.

ಇದೇ ಕಾರಣಕ್ಕೆ ಸಿಜರಿಯನ್‌ ಡೆಲವರಿ ಮಾಮೂಲಾಗಿದೆ. ಆದರೆ ನಾರ್ಮಲ್‌ ಡೆಲವರಿ ತಾಯಿ ಮತ್ತು ಮಗುವಿನ ಭವಿಷ್ಯಕ್ಕೆ, ಆರೋಗ್ಯಕ್ಕೆ ಒಳ್ಳೆಯದು ಎಂಬ ನಿರ್ಧಾರದ ಹಿನ್ನೆಲೆಯಲ್ಲಿ ಸುಖಾಸುಮ್ಮನೆ ಸಿಜರಿಯನ್‌ ಮಾಡಿಸಿಕೊಳ್ಳುವವರ ವಿರುದ್ಧ ತಿರುಗಿ ಬಿದ್ದಿರುವ ಜ್ಯೋತಿಷಿಗಳು ಇದೀಗ ಮಗು ಇಂಥ ಸಮಯದಲ್ಲಿ ಹುಟ್ಟಿದರೆ ಒಳ್ಳೆಯದು ಎಂಬ ಶುಭ ಮುಹೂರ್ತವನ್ನು ಹೇಳದಿರಲು ನಿರ್ಧರಿಸಿದ್ದಾರೆ.

ತೆಲಂಗಾಣದಲ್ಲಿನ ಜಿಲ್ಲಾಧಿಕಾರಿಗಳು ಜ್ಯೋತಿಷಿಗಳು, ಪುರೋಹಿತರು, ಹಿರಿಯ ಸ್ತ್ರೀರೋಗ ತಜ್ಞರು ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗಳೊಂದಿಗೆ (ಸಿಡಿಪಿಒ) ಸಭೆ ನಡೆಸಿ, ಸಾಮಾನ್ಯ ಸಾಂಸ್ಥಿಕ ಹೆರಿಗೆಗೆ ಉತ್ತೇಜನ ನೀಡುವ ಬಗ್ಗೆ ಚರ್ಚಿಸಿದರು, ತಜ್ಞರ ಪ್ರಕಾರ, ಇದು ತಾಯಿ ಮತ್ತು ಮಗುವಿಗೆ ಒಳ್ಳೆಯದು. ಆದ್ದರಿಂದ ಇದಕ್ಕೇ ಉತ್ತೇಜನ ನೀಡಬೇಕು ಎಂದಿದ್ದಾರೆ. ಸಾಮಾನ್ಯ ಹೆರಿಗೆಯು ಕೆಲವು ಸಂದರ್ಭಗಳಲ್ಲಿ ಕಷ್ಟಸಾಧ್ಯ. ಅಂಥ ಸಂದರ್ಭಗಳಲ್ಲಿ ಮಾತ್ರ ಸಿಜರಿಯನ್‌ ಅನಿವಾರ್ಯವಾಗುತ್ತದೆ. ಆದರೆ ಈಗ ಪರಿಸ್ಥಿತಿ ವಿಭಿನ್ನವಾಗಿದೆ ಎಂದಿರುವ ಜಿಲ್ಲಾಧಿಕಾರಿಗಳು, ಹೆರಿಗೆಯು ಸಾಧ್ಯವಾದಷ್ಟು ಸಾಮಾನ್ಯವಾಗಿರಬೇಕು ಮತ್ತು ಅವೈಜ್ಞಾನಿಕ ರೀತಿಯಲ್ಲಿ ಮಗುವನ್ನು ಹೆರಿಗೆಗೆ ಯಾರೂ ಸಮಯ ಮತ್ತು ದಿನಾಂಕವನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಸಭೆಯ ನಂತರ, ಪುರೋಹಿತರು ಮತ್ತು ಜ್ಯೋತಿಷಿಗಳುಪ್ರತ್ಯೇಕ ಸಭೆ ನಡೆಸಿ, ಇನ್ನು ಮುಂದೆ ಸಿ-ಸೆಕ್ಷನ್‌ (ಸಿಜರಿಯನ್‌) ಹೆರಿಗೆಗಳಲ್ಲಿ ಮುಹೂರ್ತವನ್ನು ನಿಗದಿಪಡಿಸುವುದಿಲ್ಲ ಎಂದು ನಿರ್ಧರಿಸಿದರು.