ನ್ಯೂಸ್

ಗಂಡ ಮೂರ್ನಾಲ್ಕು ಮದ್ವೆಯಾಗೋದು ಪತ್ನಿಗೆ ಇಷ್ಟ ಅಂದ್ಕೊಂಡ್ರಾ? ಇಂಥ ಕಾನೂನು ಯಾಕೆ ಬೇಕು ಎಂದ ಸಿಎಂ

suchetana

ನವದೆಹಲಿ: ಮುಸ್ಲಿಂ ಪುರುಷ ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗುವುದು ಅವನ ಸಮಸ್ಯೆಯಲ್ಲ, ಆದರೆ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರ ಸಮಸ್ಯೆ. ಯಾವ ಹೆಣ್ಣು ತಾನೇ ತನ್ನ ಗಂಡ ಮೂರ್ನಾಲ್ಕು ಮದುವೆಯಾಗಲಿ ಎಂದು ಇಷ್ಟಪಡುತ್ತಾಳೆ? ಹೆಣ್ಣಿಗೆ ನೋವು ತರುವ ಇಂಥ ಕಾನೂನು ಇರೋದು ಯಾಕೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರಶ್ನಿಸಿದರು.

ಕೆಲ ವರ್ಗದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿರುವ ಏಕರೂಪ ನಾಗರಿಕ ಸಂಹಿತೆ ಕುರಿತು ಅವರು ಮಾತನಾಡುವ ವೇಳೆ, ಈ ಕಾಯ್ದೆ ಜಾರಿಯ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು. ದೆಹಲಿಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಭೇಟಿ ಮಾಡಿದ ಅವರು ಮಾತನಾಡುತ್ತಿದ್ದರು.

ಯಾವುದೇ ಮುಸ್ಲಿಂ ಮಹಿಳೆ ತನ್ನ ಪತಿ ಮೂವರು ಹೆಂಡತಿಯರನ್ನು ಹೊಂದುವುದನ್ನು ಬಯಸುವುದಿಲ್ಲ. ಯಾರಿಗೂ ಇದು ಬೇಕಾಗಿಲ್ಲ. ನೀವು ಯಾವುದೇ ಮುಸ್ಲಿಂ ಮಹಿಳೆಯನ್ನು ಕೇಳಬಹುದು. ಅವಳ ಪತಿ ಮೂರು ಮಹಿಳೆಯರನ್ನು ಮದುವೆಯಾಗಬೇಕು ಎಂದು ಯಾರೂ ನಿಮಗೆ ಹೇಳುವುದಿಲ್ಲ. ಹೆಣ್ಣಿಗೆ ನೋವು ತರುವ ಈ ಕಾನೂನು ಯಾಕೆ ಬೇಕು? ಎಲ್ಲರಿಗೂ ಒಂದೇ ರೀತಿಯ ಕಾನೂನು ಜಾರಿಗೆ ತರಬೇಕಿದೆ ಎಂದರು.

ಉತ್ತರ ರಾಜ್ಯದಲ್ಲಿ ಜಾರಿಗೆ ತರಲು ಕಾಯ್ದೆಯ ಕರಡನ್ನು ಸಿದ್ಧಪಡಿಸಲಾಗುತ್ತಿದೆ. ನಾವು ಭೇಟಿಯಾಗಿರುವ ಹಲವಾರು ಮುಸ್ಲಿಂ ಬಾಂಧವರು ಈ ಕಾಯ್ದೆಯನ್ನು ಬಯಸುತ್ತಿದ್ದಾರೆ. ಇದರ ಅವಶ್ಯಕತೆ ಇದೆ ಎನ್ನುತ್ತಿದ್ದಾರೆ ಎಂಬ ಮಾಹಿತಿಯನ್ನು ಸಿಂಗ್​ ನೀಡಿದರು.

ತ್ರಿವಳಿ ತಲಾಖ್ ರದ್ದತಿ ನಂತರ ಎಷ್ಟೋ ಮುಸ್ಲಿಂ ಮಹಿಳೆಯರು ನೆಮ್ಮದಿ ಕಂಡುಕೊಂಡಿದ್ದಾರೆ. ಇದೀಗ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದು ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚು ಮದುವೆಯಾಗುವುದನ್ನು ತಡೆಯಬೇಕಿದೆ ಎಂದು ಅಭಿಪ್ರಾಯ ಪಟ್ಟರು. ನನ್ನ ಮಗಳಂತೆಯೇ ಮುಸ್ಲಿಂ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಸರ್ಕಾರದ ಕರ್ತವ್ಯ. ಯಾವುದೇ ಹೆಣ್ಣು ತನ್ನ ಪತಿ ಹೆಚ್ಚಿನ ಮದುವೆಯಾಗಲಿ ಎಂದು ಆಸೆ ಪಡುವುದಿಲ್ಲ. ಆದ್ದರಿಂದ ಮುಸ್ಲಿಂ ಹೆಣ್ಣು ಮಕ್ಕಳ ರಕ್ಷಣೆ ಕೊಡುವುದು ಅತ್ಯಗತ್ಯವಾಗಿದೆ. ಒಂದು ದೇಶದಲ್ಲಿ ಎಲ್ಲರಿಗೂ ಒಂದು ಕಾನೂನು ಸಮಯದ ಅಗತ್ಯವಾಗಿದೆ. ಒಬ್ಬ ವ್ಯಕ್ತಿಗೆ ಒಂದು ಮತ್ತು ಇತರರಿಗೆ ಇನ್ನೊಂದು ಕಾನೂನು ಎಂಬ ವ್ಯವಸ್ಥೆಯಿಂದ ನಾವು ಹೊರಬರಬೇಕು. ನಾವು ಸಾಮಾನ್ಯ ನಾಗರಿಕ ಸಂಹಿತೆಯ ಪರವಾಗಿರುತ್ತೇವೆ ಎಂದು ಅವರು ಹೇಳಿದರು.