ನ್ಯೂಸ್

ವಿಡಿಯೋ: ವಿಮಾನದೊಳಕ್ಕೆ ಸೆಖೆ ಎಂದು ಈಕೆ ಹೀಗೆ ಮಾಡೋದಾ? ಬೇಸ್ತು ಬಿದ್ದ ಪ್ರಯಾಣಿಕರು

ಉಕ್ರೇನ್‌: ಸಾರ್ವಜನಿಕ ವಾಹನಗಳಲ್ಲಿ ಸೆಖೆಯಾದರೆ ಹೊರಗೆ ಹೋಗುವುದು ಮಾಮೂಲು. ಹಾಗೆಂದು ವಿಮಾನದೊಳಕ್ಕೆ ಸೆಖೆಯಾದರೂ ಹಾಗೇ ಮಾಡಿದರೆ ಹೇಗಿರತ್ತೆ?

ಇಂಥದ್ದೇ ಒಂದು ಹುಚ್ಚು ಸಾಹಸ ಮಾಡಿದ್ದಾಳೆ ಉಕ್ರೇನ್‌ ಮಹಿಳೆ. ವಿಮಾನದೊಳಕ್ಕೆ ಸೆಖೆ ಎನ್ನುವ ಕಾರಣಕ್ಕೆ ವಿಮಾನದ ರೆಕ್ಕೆಯ ಮೇಲೆ ನಡೆದಾಡಿ ಕೆಲಕಾಲ ಆತಂಕ ಸೃಷ್ಟಿಸಿದ್ದಾಳೆ ಈಕೆ.

ಈ ಮಹಿಳೆಯ ದುಸ್ಸಾಹಸದ ವಿಡಿಯೋ ವೈರಲ್‌ ಆಗಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಟರ್ಕಿಯಲ್ಲಿ ರಜಾದಿನಗಳನ್ನು ಕಳೆದಿದ್ದ ಈ ಮಹಿಳೆ ಇಬ್ಬರು ಮಕ್ಕಳೊಂದಿಗೆ ಬೋಯಿಂಗ್ 737-86 ಎನ್ ವಿಮಾನದಲ್ಲಿ ಬಂದಿದ್ದರು. ವಿಮಾನವು ಉಕ್ರೇನ್‌ನ ಕೈವ್‌ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಆಗಿತ್ತು.

ಈ ವೇಳೆ, ವಿಮಾನದಿಂದ ಇಳಿಯುವ ಪ್ರಯಾಣಿಕರದ್ದು ದೊಡ್ಡ ಕ್ಯೂ ಇತ್ತು. ಕ್ಯೂನಲ್ಲಿ ಹಿಂದೆ ನಿಂತಿದ್ದ ಈ ಮಹಿಳೆಗೆ ಸೆಖೆ ಜಾಸ್ತಿಯಾಯಿತಂತೆ. ಅದಕ್ಕೇ ಈಕೆ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದು ಸ್ವಲ್ಪ ಹೊತ್ತು ವಿಮಾನದ ರೆಕ್ಕೆಯಲ್ಲಿ ಓಡಾಡಿದ್ದಾರೆ. ಸ್ವಲ್ಪ ಹೊತ್ತು ವಿಮಾನದ ರೆಕ್ಕೆ ಮೇಲೆ ನಿಂತು ಅತ್ತಿಂದಿತ್ತ ಓಡಾಡಿದ ಈ ಮಹಿಳೆ ಬಳಿಕ ಕ್ಯಾಬಿನ್‌ ಒಳಗೆ ಹೋಗಿದ್ದಾರೆ.

ಈ ರೀತಿ ಮಾಡುವುದು ತುಂಬಾ ಅಪಾಯಕಾರಿ. ರೆಕ್ಕೆಯಲ್ಲಿ ಸ್ವಲ್ಪ ಏರುಪೇರಾದರೂ ಟೇಕಾಫ್‌ ಹಾಗೂ ಲ್ಯಾಂಡಿಂಗ್‌ ಆಗುವಾಗ ಅಪಾಯ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಸ್ವಲ್ಪ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಾಮಾನ್ಯವಾಗಿ ಯಾರೂ ಇಂಥ ಕೃತ್ಯ ಮಾಡುವುದಿಲ್ಲ. ಆದ್ದರಿಂದ ಈಕೆ ಮದ್ಯಪಾನ ಮಾಡಿರಬೇಕು ಎಂದು ಎಲ್ಲರೂ ಅಂದುಕೊಂಡರು.

ಇದರಿಂದ ಭಯಗೊಂಡ ವಿಮಾನನಿಲ್ದಾಣ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಈಕೆಯನ್ನು ಪರೀಕ್ಷೆ ಮಾಡಿ ಮಾದಕ, ಮದ್ಯ ಏನನ್ನೂ ಈಕೆ ಸೇವನೆ ಮಾಡಿಲ್ಲ ಎಂದು ತಿಳಿಸಿದ್ದಾರೆ. ನಂತರ ಮಹಿಳೆ ತನಗೆ ಸೆಖೆಯಾಗಿದ್ದರಿಂದ ಹೀಗೆ ಮಾಡಿದೆ ಎಂದು ಹೇಳಿದ್ದಾಳೆ. ಈ ದೃಶ್ಯವನ್ನು ರನ್‌ವೇಯಿಂದ ಸೆರೆ ಹಿಡಿಯಲಾಗಿದೆ.

ಕೆಲ ತಿಂಗಳ ಹಿಂದೆ ನೈಜೀರಿಯಾದ ಇಕೆಜಾದಲ್ಲಿ ವ್ಯಕ್ತಿಯೊಬ್ಬ ಇನ್ನೇನು ಟೇಕಾಫ್ ಆಗಬೇಕು ಎನ್ನುವ ವಿಮಾನದ ರೆಕ್ಕೆಯ ಮೇಲೇರಿದ್ದು ಆತಂಕ ಸೃಷ್ಟಿಸಿದ್ದ. ಭದ್ರತಾ ತಪಾಸಣೆಗಳನ್ನೆಲ್ಲ ತಪ್ಪಿಸಿ ಒಳಕ್ಕೆ ಬಂದಿದ್ದ ಮುರ್ತಲಾ ಎಂಬಾತ, ಇಂಜಿನ್ ಒಂದರಲ್ಲಿ ತಾನು ತಂದಿದ್ದ ಸೂಟ್​ಕೇಸ್ ತುರುಕಿದ್ದ. ವಿಮಾನ ಟೇಕಾಫ್ ಆಗಲು ರನ್​ವೇ ಸಜ್ಜಾಗಿದೆ ಎನ್ನುವಷ್ಟರಲ್ಲಿ ಈತ ಅದರ ರೆಕ್ಕೆಯನ್ನೇರಿದ್ದ. ಅದನ್ನು ಕಂಡು ಕೂಡಲೇ ಸ್ಥಳಕ್ಕೆ ಧಾವಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು ಆ ವ್ಯಕ್ತಿಯನ್ನು ಬಂಧಿಸಿದ್ದರು.