ಚೆನ್ನೈ: ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಸೇರಿದಂತೆ 14 ಮಂದಿಯನ್ನು ಬಲಿಪಡೆದತ ಮಿಳುನಾಡಿನ ಕೂನೂರಿನ ನಂಜಪ್ಪ ಸದಿರಂ ಹಳ್ಳಿಯನ್ನು ಭಾರತೀಯ ಸೇನೆ ದತ್ತು ಪಡೆದಿದೆ.
ಹೆಲಿಕಾಪ್ಟರ ದುರಂತದ ವೇಳೆ ಗ್ರಾಮಸ್ಥರು ಸಲ್ಲಿಸಿರುವ ಸೇವೆಗೆ ಈ ರೀತಿಯಾಗಿ ಧನ್ಯವಾದ ಸಲ್ಲಿಸಲಾಗಿದೆ. ಇಷ್ಟೇ ಅಲ್ಲದೇ ಈ ಗ್ರಾಮದ ಸುತ್ತಮುತ್ತಲು ಇರುವ ಹಳ್ಳಿಗರು ಕೂಡ ಅಪಘಾತದ ಸಮಯದಲ್ಲಿ ನೆರವಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿರುವ ಸೇನೆ, ಅದನ್ನು ಕೂಡ ದತ್ತು ಪಡೆದುಕೊಳ್ಳುವುದಾಗಿ ಘೋಷಿಸಿದೆ.
ಅಪಘಾತ ಕಂಡಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ ಇಬ್ಬರು ಗ್ರಾಮಸ್ಥರಿಗೆ ಸೇನೆ 5,000 ರೂ ನಗದು ಬಹುಮಾನ ನೀಡಿತು. ಜತೆಗೆ ಸ್ಥಳೀಯರಿಗೆ ಬ್ಲಾಂಕೆಟ್, ಪಡಿತರ ಸಾಮಗ್ರಿಗಳು, ಸೋಲಾರು ತುರ್ತು ದೀಪಗಳನ್ನು ವಿತರಿಸಲಾಯಿತು.
ಅಂದು ಹೆಲಿಕಾಪ್ಟರ್ ದುರಂತ ನಡೆದ ಸಂದರ್ಭದಲ್ಲಿ ಗ್ರಾಮಸ್ಥರು ಮಾಡಿರುವ ಸೇವೆ ಅಮೋಘವಾದದ್ದು. ಪ್ರಪಾತದಲ್ಲಿ ಸಿಲುಕಿದ್ದ ನಮ್ಮ ಯೋಧರನ್ನು ರಕ್ಷಿಸುವ ಕಾರ್ಯದಲ್ಲಿ ಅವರು ಸಲ್ಲಿಸಿರುವ ಸೇವೆ, ನಡೆಸಿದ ಕಾರ್ಯಾಚರಣೆಯನ್ನು ಮರೆಯಲು ಸಾಧ್ಯವಿಲ್ಲ. ಗ್ರಾಮಸ್ಥರಿಗೆ ಯಾವ ರೀತಿಯ ಧನ್ಯವಾದ ಸಲ್ಲಿಸಿದರೂ ಕಡಿಮೆಯೇ. ಈ ಹಿನ್ನೆಲೆಯಲ್ಲಿ ಅವರ ಉಪಕಾರವನ್ನು ಸ್ಮರಿಸುವುದಕ್ಕಾಗಿ ಗ್ರಾಮವನ್ನು ದತ್ತು ಪಡೆದುಕೊಳ್ಳಲಾಗುವುದು ಎಂದು ಜನರಲ್ ಆಫೀಸರ್ ಕಮಾಂಡಿಂಗ್ ಕೇಂದ್ರ ಕಚೇರಿ ದಕ್ಷಿಣ ಭಾರತದ ಲೆಫ್ಟಿನೆಂಟ್ ಜನರಲ್ ಎ ಅರುಣ್ ಹೇಳಿದ್ದಾರೆ.
ನಂಜಪ್ಪ ಸದಿರಂ ಹಳ್ಳಿಗೆ ಭೇಟಿ ನೀಡಿದ ಅವರು ದತ್ತು ಕುರಿತು ಈ ಘೋಷಣೆ ಮಾಡಿದ್ದಾರೆ. ಹೆಲಿಕಾಪ್ಟರ್ ಅಪಘಾತಕ್ಕೀಡಾಗುವುದನ್ನು ಕಂಡ ಕೆಲವು ಗ್ರಾಮಸ್ಥರು ಕೂಡಲೇ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು. ಜತೆಗೆ ಸುತ್ತಲೂ ಹೊತ್ತಿ ಉರಿಯುತ್ತಿದ್ದ ಬೆಂಕಿಯ ನಡುವೆ ಒಳಗಿದ್ದವರನ್ನು ಹೊರಕ್ಕೆಳೆಯಲು ಸಹಾಯ ಮಾಡಿದ್ದರು. ಇಂಥ ಸೇವೆ ಸಲ್ಲಿಸಿರುವ ಗ್ರಾಮಸ್ಥರು ದೇವರು ಎಂದು ಕರೆದಿದ್ದಾರೆ.
ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ಕಾರ್ಯಕ್ರಮಗಳು ಹಾಗೂ ಸಮಾರಂಭಗಳನ್ನು ನಡೆಸಲು ಸೂಕ್ತವಾಗುವ ಶೆಡ್ ಒಂದನ್ನು ನಿರ್ಮಿಸಿ ಕೊಡಲಾಗುವುದು. ವೈದ್ಯಕೀಯ ಶಿಬಿರಗಳನ್ನು ನಡೆಸಲು ವೈದ್ಯರು ಮತ್ತು ದಾದಿಯರನ್ನು ಹಳ್ಳಿಗೆ ಕಳುಹಿಸಲಾಗುವುದು ಎಂದು ಲೆಫ್ಟಿನೆಂಟ್ ಜನರಲ್ ಅರುಣ್ ತಿಳಿಸಿದರು. ಘಟನೆಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ 13 ಮಂದಿ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಹಲವು ದಿನಗಳ ಹೋರಾಟದ ನಂತರ ಚಿಕಿತ್ಸೆ ಫಲಿಸದೇ ಇಂದು ಕಮಾಂಡರ್ ವರುಣ್ ಸಿಂಗ್ ಕೂಡ ಮೃತಪಟ್ಟಿದ್ದಾರೆ.