ನ್ಯೂಸ್

ಅನಂತ್​ಕುಮಾರ್​ ಸೇರಿದಂತೆ 17 ಸಂಸದರಿಗೆ ಕರೊನಾ ಪಾಸಿಟಿವ್

suchetana

ನವದೆಹಲಿ: ಇಂದು ಮುಂಗಾರು ಅಧಿವೇಶನ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಸದರು ಸೇರಿದಂತೆ ಎಲ್ಲರಿಗೂ ಕರೊನಾ ಪರೀಕ್ಷೆ ಕಡ್ಡಾಯವಾಗಿದೆ.

ಈ ಹಿನ್ನೆಲೆಯಲ್ಲಿ ಸಂಸದರನ್ನು ಪರೀಕ್ಷೆಗೆ ಒಳಪಡಿಸಿದಾಗ ಅನಂತ್​ಕುಮಾರ್​ ಹೆಗಡೆ ಸೇರಿದಂತೆ 17 ಮಂದಿಗೆ ಕರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ.

ಸಂಸದ ಅನಂತ್​ಕುಮಾರ್​ ಅವರು ಕಳೆದ ಶುಕ್ರವಾರ ಅವರು ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನದ ಮೂಲಕ ತೆರಳಿದ್ದರು. ಅಲ್ಲಿಗೆ ತಲುಪಿದ ಬಳಿಕ ಎನ್ ಐಸಿಪಿಆರ್ ಆಸ್ಪತ್ರೆಯಲ್ಲಿ ತಪಾಸಣೆಗೊಳಪಟ್ಟಿದ್ದರು. ಈ ವೇಳೆ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.

ತಮಗೆ ಯಾವುದೇ ರೀತಿಯಲ್ಲಿಯೂ ಸೋಂಕಿನ ಲಕ್ಷಣಗಳು ಇಲ್ಲ. ಆದರೂ ಪಾಸಿಟಿವ್​ ಬಂದಿದೆ ಎಂದು ಅನಂತ್​ಕುಮಾರ್​ ಹೇಳಿದ್ದಾರೆ. ಸದ್ಯ ಇವರು ದೆಹಲಿಯ ನಿವಾಸದಲ್ಲಿ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಇವರಿಗೆ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಶಿರಸಿಯ ಅವರ ನಿವಾಸಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಕುಟುಂಬದವರ ಗಂಟಲುದ್ರವ ಪರೀಕ್ಷಿಸಿದ್ದು ಅವರೆಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಹೇಳಲಾಗಿದೆ.

ಈ ನಡುವೆಯೇ, ಅಧಿವೇಶನದಲ್ಲಿ ಹಾಜರು ಆಗಹೊರಟಿದ್ದ ಸಂಸದರನ್ನು ಪರೀಕ್ಷೆ ಮಾಡಿದಾಗ 16 ಮಂದಿಗೆ ಕರೊನಾ ಪಾಸಿಟಿವ್​ ಬಂದಿದೆ.

ಇವರ ಪೈಕಿ ಅತ್ಯಧಿಕ ಕರೊನಾ ಪಾಸಿಟಿವ್​ ಬಂದಿರುವುದು ಬಿಜೆಪಿ ಸಂಸದರಿಗೆ. 12 ಮಂದಿ ಬಿಜೆಪಿ ಸಂಸದರು, ಇಬ್ಬರು ವೈಎಸ್​ಆರ್​ ಕಾಂಗ್ರೆಸ್​, ಹಾಗೂ ತಲಾ ಒಬ್ಬರು ಶಿವ ಸೇನಾ, ಡಿಎಂಕೆ ಹಾಗೂ ಆರ್​ಎಲ್​ಪಿ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಸಂಸದ ಸುಕಂಠ ಮಜುಮ್ದಾರ್​ ಅವರು ನಿನ್ನೆನೇ ತಮಗೆ ಪಾಸಿಟಿವ್​ ಬಂದಿರುವ ಕುರಿತು ಟ್ವೀಟ್​ ಮಾಡಿದ್ದರು. ತಮ್ಮ ಸಂಪರ್ಕಕ್ಕೆ ಬಂದಿರುವವರು ಪರೀಕ್ಷೆಗೆ ಒಳಗಾಗುವಂತೆ ಹೇಳಿದ್ದರು.