ನ್ಯೂಸ್

ಶವ ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ ಅಪಘಾತ: ಚಾಲಕ, ಕುಟುಂಬಸ್ಥರು ಸೇರಿ ಐವರ ಸಾವು

ಚಿತ್ತೋರ್‌ಗಢ (ಉತ್ತರ ಪ್ರದೇಶ): ಮೃತದೇಹವನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ ಒಂದು ದಾರಿ ಬದಿ ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದು ಐವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬಡೋದಿ ಜಿಲ್ಲೆಯ ಗೋಪಿಗಂಜ್ ನಲ್ಲಿ ನಡೆದಿದೆ.

ಜಿಲ್ಲೆಯ ಗೋಪಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ವಾರಾಣಸಿ-ಪ್ರಯಾಗರಾಜ್ ಹೆದ್ದಾರಿಯಲ್ಲಿ ಅಮಾವಾ ಅಂಡರ್‌ಪಾಸ್ ಬಳಿ ನಿಂತಿದ್ದ ಟ್ರಕ್‌ಗೆ ಆಂಬ್ಯುಲೆನ್ಸ್‌ ಡಿಕ್ಕಿ ಹೊಡೆದಿದೆ. ದಟ್ಟ ಮಂಜಿನಿಂದಾಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಬ್ಯುಲೆನ್ಸ್ ಮೃತದೇಹವನ್ನು ಪಶ್ಚಿಮ ಬಂಗಾಳದ ಅಸನ್ಸೋಲ್‌ನಿಂದ ರಾಜಸ್ಥಾನದ ಚಿತ್ತೋರ್‌ಗಢಕ್ಕೆ ಸಾಗಿಸುತ್ತಿತ್ತು. ಕೋಲ್ ಇಂಡಿಯಾ ಲಿಮಿಟೆಡ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವಿಪಿನ್ ಪಾಲ್ ಸಿಂಗ್ (30) ಅವರ ಮೃತದೇಹವನ್ನು ಅವರ ಹಿರಿಯ ಸಹೋದರ ನವನೀತ್ ಸಿಂಗ್ ಮತ್ತು ಅವರ ಸ್ನೇಹಿತ ರಾಜ್‍ವೀರ್ ಮತ್ತು ಇನ್ನಿಬ್ಬರು ಸಾಗಿಸುತ್ತಿದ್ದರು. ಚಾಲಕ ಸೇರಿದಂತೆ ಆಂಬುಲೆನ್ಸ್‌ನಲ್ಲಿದ್ದ ಎಲ್ಲ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆಂಬುಲೆನ್ಸ್ ಅತಿ ವೇಗವಾಗಿ ಚಲಿಸುತ್ತಿದ್ದುದು ಈ ಅನಾಹುತಕ್ಕೆ ಕಾರಣವಾಗಿದೆ. ಬಡೋದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.