ಅಲಹಾಬಾದ್: ಭಗವಾನ್ ರಾಮ, ಶ್ರೀಕೃಷ್ಣ, ರಾಮಾಯಣ, ಮಹಾಭಾರತ ಗೀತಾ, ಮಹರ್ಷಿ ವಾಲ್ಮೀಕಿ ಮತ್ತು ಮಹರ್ಷಿ ವೇದವ್ಯಾಸರಿಗೆ ‘ರಾಷ್ಟ್ರೀಯ ಸಮ್ಮಾನ್’ ನೀಡಬೇಕಿದೆ. ಇಂಥ ಗೌರವ ಸಿಗುವ ಕಾನೂನನ್ನು ತರುವ ಅವಶ್ಯಕತೆ ಇದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಇವೆಲ್ಲವೂ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆ. ಅವುಗಳನ್ನು ಜತನದಿಂದ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ದೇಶಾದ್ಯಂತ ಶಾಲೆಗಳಲ್ಲಿ ಕಡ್ಡಾಯವಾಗಿ ಭಾರತೀಯ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವತೆಗಳ ಆಕ್ಷೇಪಾರ್ಹ ಚಿತ್ರಗಳನ್ನು ಹಂಚಿಕೊಂಡಿದ್ದರಿಂದ ಬಂಧನಕ್ಕೆ ಹತ್ರಾಸ್‌ನ ಆಕಾಶ್ ಜಾಟವ್ ಎಂಬಾತನ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಈ ರೀತಿ ಹೇಳಿದ್ದಾರೆ. ಭಾರತದ ಸಂವಿಧಾನವು ಒಬ್ಬ ನಾಸ್ತಿಕನಾಗಲು ಅವಕಾಶ ನೀಡುತ್ತದೆ. ಆದರೆ, ಇದು ದೇವರ ವಿರುದ್ಧ ಅಶ್ಲೀಲ ಹೇಳಿಕೆ ನೀಡಲು ನೀಡಲಾದ ಅನುಮತಿಯಲ್ಲ ಎಂದಿದ್ದಾರೆ ನ್ಯಾಯಮೂರ್ತಿಗಳು.
ರಾಮ ಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಭಗವಾನ್ ರಾಮನನ್ನು ನಂಬುವವರ ಪರವಾಗಿ ತನ್ನ ನಿರ್ಧಾರವನ್ನು ನೀಡಿದೆ. ರಾಮ ಭಾರತದ ಆತ್ಮ ಮತ್ತು ಸಂಸ್ಕೃತಿ. ರಾಮನಿಲ್ಲದೇ ಭಾರತ ಅಪೂರ್ಣ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಜಾಟವ್ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಆದರೆ ಕಳೆದ 10 ತಿಂಗಳುಗಳಿಂದ ಜೈಲಿನಲ್ಲಿ ಇರುವ ಕಾರಣ ಆತನಿಗೆ ಜಾಮೀನು ಮಂಜೂರು ಮಾಡಲಾಗಿದೆ. ಆದರೆ ಇದೇ ವೇಳೆ, ಈ ರೀತಿ ಅವಹೇಳನ ಮಾಡುವವರಿಗೆ ಹಲವು ದೇಶಗಳಲ್ಲಿ ಕಠಿಣ ಶಿಕ್ಷೆ ಇದೆ ಎಂದೂ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.