ನ್ಯೂಸ್

VIDEO: ಸಂಸದ ಸ್ಥಾನ ತೊರೆದು ಶಾಸಕರಾಗಿ ಉಳಿದುಕೊಂಡ ಅಖಿಲೇಶ್‌! ಮುಂದಿನ ಚುನಾವಣೆ ಮೇಲೆ ಕಣ್ಣು?

ಲಖನೌ: ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಕರ್ಹಾಲ್‌ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿರುವ ಸಂಸದ ಅಖಿಲೇಶ್‌ ಯಾದವ್‌ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉತ್ತರ ಪ್ರದೇಶದ ಅಜಂಗಢದ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶಾಸಕರಾಗಿ ಮುಂದುವರೆಯಲು ನಿರ್ಧರಿಸಿದ್ದಾರೆ.

ಅಖಿಲೇಶ್ ಯಾದವ್ ಇದಕ್ಕೂ ಮೊದಲು ಯಾವುದೇ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಅವರು ಹಿಂದಿನ ಅವಧಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿಯೂ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಖಿಲೇಶ್‌ 1,48,196 ಮತಗಳನ್ನು ಗಳಿಸಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಎಸ್‌ಪಿ ಸಿಂಗ್ ಬಘೇಲ್ 80,692 ಮತಗಳನ್ನು ಪಡೆದಿದ್ದರು.

ಸ್ಪೀಕರ್ ಓಂ ಬಿರ್ಲಾ ಅವರ ಕಚೇರಿಗೆ ಭೇಟಿ ನೀಡಿದ ಅಖಿಲೇಶ್ ಯಾದವ್ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಅಖಿಲೇಶ್‌ ಯಾದವ್‌ ಅವರ ಈ ನಡೆದ ಮುಂಬರುವ ಅಂದರೆ 2027ರ ಉತ್ತರ ಪ್ರದೇಶದ ಚುನಾವಣೆ ಮೇಲೆ ಕಣ್ಣಿಟ್ಟಿರುವಂತೆ ಕಾಣಿಸುತ್ತಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಉತ್ತರ ಪ್ರದೇಶದ 403 ಸ್ಥಾನಗಳ ಪೈಕಿ ಸಮಾಜವಾದಿ ಪಕ್ಷ 111 ಸ್ಥಾನಗಳನ್ನು ಪಡೆದು ಎರಡನೇ ಸ್ಥಾನವನ್ನು ಗಳಿಸಿತು. ಅಂದಹಾಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ನೇರಾನೇರ ಎದುರಾಳಿಯಾಗಿದ್ದು ಅಖಿಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷ. ಉತ್ತರ ಪ್ರದೇಶದ 403 ಸ್ಥಾನಗಳ ಪೈಕಿ ಸಮಾಜವಾದಿ ಪಕ್ಷ 111 ಸ್ಥಾನಗಳನ್ನು ಪಡೆದು ಎರಡನೇ ಸ್ಥಾನವನ್ನು ಗಳಿಸಿತು. ಬಿಜೆಪಿ 255 ಸ್ಥಾನಗಳನ್ನು ಗಳಿಸಿ ಮತ್ತೆ ಸರ್ಕಾರ ರಚಿಸಲು ಸಜ್ಜಾಗಿದೆ. ಮಿತ್ರಪಕ್ಷಗಳೊಂದಿಗೆ ಬಿಜೆಪಿ 273 ಸ್ಥಾನಗಳನ್ನು ಗೆದ್ದಿದೆ.