ನ್ಯೂಸ್

ಏರ್​ಟೆಲ್​ ಪ್ರೀಪೇಯ್ಡ್​ ಬಳಕೆದಾರರಿಗೆ ಬಿಗ್​ ಶಾಕ್​: ರೀಚಾರ್ಜ್​ ಹಣ ದುಪ್ಪಟ್ಟು

suchetana

ನವದೆಹಲಿ: ದೇಶದ ಅತ್ಯಂತ ದೊಡ್ಡ ಟೆಲಿಕಾಂ ನೆಟ್​ವರ್ಕ್ ಎನಿಸಿಕೊಂಡಿರುವ ಏರ್​ಟೆಲ್​ ತನ್ನ ಗ್ರಾಹಕರಿಗೆ ದೊಡ್ಡದೊಂದು ಶಾಕ್​ ನೀಡಿದೆ. ತನ್ನ ಆರಂಭಿಕ ಹಂತದ ಪ್ರೀಪೇಯ್ಡ್ ಯೋಜನೆಯ ದರವನ್ನು ಹೆಚ್ಚಳ ಮಾಡಿದೆ.

ಈಗಾಗಲೇ ಕೆಲ ರಾಜ್ಯಗಳಲ್ಲಿ ರಿಚಾರ್ಜ್ ಶುಲ್ಕ ದರಗಳಲ್ಲಿ ಪರಿಷ್ಕರಣೆ ಮಾಡಿರುವ ಏರ್​ಟೆಲ್​ ಇದೀಗ ದೇಶಾದ್ಯಂತ ಈ ದರ ಹೆಚ್ಚಳವನ್ನು ಅನ್ವಯ ಮಾಡಿದೆ. ಟೆಲಿಕಾಂ ನೆಟ್ ವರ್ಕ್ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಆಗುತ್ತಿರುವ ಸಂದರ್ಭದಲ್ಲಿಯೇ ಏರ್​ಟೆಲ್​ ಈ ನಿರ್ಧಾರ ತೆಗೆದುಕೊಂಡಿದೆ. ತನ್ನ ಆರಂಭಿಕ ಹಂತದ ಪ್ರೀಪೇಯ್ಡ್ ಯೋಜನೆಯ ದರವನ್ನು ಶೇಕಡಾ 60 ರಷ್ಟು ಏರಿಕೆ ಮಾಡಿದೆ.

ಶೇಕಡಾ 60ರಷ್ಟು ಹೆಚ್ಚಳ ಮಾಡಿರುವುದರಿಂದ 49 ರೂಪಾಯಿಗೆ ಇದ್ದ ರೀಚಾರ್ಜ್ ಬೆಲೆ ಈಗ 79 ರೂಪಾಯಿ ಆಗಿದೆ.

ಈ ಮೊದಲು 49 ರೂಪಾಯಿಯ ಪ್ಲಾನ್​ನಲ್ಲಿ 100 ಎಂಬಿ ಡೇಟಾ ಮತ್ತು 38.52 ರೂಪಾಯಿ ಮೌಲ್ಯದ ಟಾಕ್ ಟೈಮ್ ದೊರೆಯುತ್ತಿತ್ತು. 100 ಎಂಬಿ ಡೇಟಾ ಮಗಿದ ಮೇಲೆ ಪ್ರತಿ ಒಂದು ಎಂಬಿ ಡೇಟಾಗೆ 0.50ರಷ್ಟು ಶುಲ್ಕ ಬೀಳುತ್ತಿತ್ತು. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತಿತ್ತು. ಆದರೆ 79 ರೂಪಾಯಿ 28 ದಿನಗಳ ಸಿಂಧುತ್ವ ಇರಲಿದ್ದು, 64ರ ಟಾಕ್‌ ಟೈಮ್‌ ಮತ್ತು 200 ಎಂಬಿ ಡೇಟಾ ದೊರೆಯಲಿದೆ ಎಂದು ಕಂಪೆನಿ ಹೇಳಿದೆ. ಬೇರೆ ಕಂಪೆನಿಗಳ ಸಿಮ್​ ಉಪಯೋಗಿಸುತ್ತಿರುವ ಹಲವು ಗ್ರಾಹಕರು ಈ ಆರಂಭಿಕ ಪ್ಲ್ಯಾನ್ ಆಗಿರುವ ರೂ.49 ಮಾತ್ರ ರೀಚಾರ್ಜ್​ ಮಾಡುತ್ತಿದ್ದು, ಅವರಿಗೆ ಈ ಹೊಸ ಶುಲ್ಕ ಭಾರಿ ಹೊಡೆತ ಬೀಳಲಿದೆ.

ರಿಚಾರ್ಜ್ ಶುಲ್ಕದಲ್ಲಿ ಕಡಿತ ಅಲ್ಲದೇ, ಸೇವಾವಧಿಯಲ್ಲಿ ಇಳಿಕೆ ಕೂಡ ಮಾಡಲು ಚಿಂತನೆ ನಡೆಸಿದ್ದು ಇದು ಮುಂದಿನ ತಿಂಗಳಿನಿಂದ ಜಾರಿ ಬರುವ ನಿರೀಕ್ಷೆ ಇದೆ.